ADVERTISEMENT

Delhi elections: 15 ಭರವಸೆ ಒಳಗೊಂಡ ‘ಕೇಜ್ರಿವಾಲ್‌ ಕಿ ಗ್ಯಾರಂಟಿ’ ಬಿಡುಗಡೆ

ಪಿಟಿಐ
Published 27 ಜನವರಿ 2025, 7:27 IST
Last Updated 27 ಜನವರಿ 2025, 7:27 IST
<div class="paragraphs"><p>ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಜ್ರಿವಾಲ್</p></div>

ಪ್ರಣಾಳಿಕೆ ಬಿಡುಗಡೆ ಮಾಡಿದ ಕೇಜ್ರಿವಾಲ್

   

ನವದೆಹಲಿ: ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಡುವುದು ಮತ್ತು ಯಮುನಾ ನದಿಯನ್ನು ಸ್ವಚ್ಛಗೊಳಿಸುವುದೂ ಸೇರಿದಂತೆ 15 ಭರವಸೆಗಳನ್ನು ಒಳಗೊಂಡ ‘ಕೇಜ್ರಿವಾಲ್‌ ಕಿ ಗ್ಯಾರಂಟಿ’ಯನ್ನು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ಸೋಮವಾರ ಬಿಡುಗಡೆಗೊಳಿಸಿದರು.

ದೆಹಲಿ ವಿಧಾನಸಭಾ ಚುನಾವಣೆಗೆ ಎಎಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿನ ಬಹುತೇಕ ಭರವಸೆಗಳನ್ನು ಕಳೆದ ಒಂದು ತಿಂಗಳ ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಘೋಷಿಸಲಾಗಿದೆ.

ADVERTISEMENT

‘ಬಿಜೆಪಿ ಅಧಿಕಾರಕ್ಕೆ ಬಂದರೆ ಎಎಪಿ ಸರ್ಕಾರದ ಎಲ್ಲ ಜನಪರ ಯೋಜನೆಗಳನ್ನು ನಿಲ್ಲಿಸುವುದಾಗಿ ಈಗಾಗಲೇ ಘೋಷಿಸಿದೆ. ಹಾಗಾದಲ್ಲಿ, ದೆಹಲಿಯ ಜನರಿಗೆ ಪ್ರತಿ ತಿಂಗಳು ₹25 ಸಾವಿರದಷ್ಟು ಹೆಚ್ಚುವರಿ ಹೊರೆ ಬೀಳಲಿದೆ. ಬಿಜೆಪಿಯು ಈ ಯೋಜನೆಗಳನ್ನು ನಿಲ್ಲಿಸಿದರೆ, ಆ ವೆಚ್ಚವನ್ನು ಭರಿಸಲು ನೀವು ಸಿದ್ಧರಿದ್ದೀರಾ ಎಂದು ದೆಹಲಿಯ ಜನರನ್ನು ಕೇಳಲು ಬಯಸುತ್ತೇನೆ’ ಎಂದು ಕೇಜ್ರಿವಾಲ್‌ ಹೇಳಿದರು.

‘ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಚುನಾವಣೆಯ ಸಮಯದಲ್ಲಿ ನೀಡುವ ಭರವಸೆಗಳು ವಿಭಿನ್ನ ಹೆಸರುಗಳಲ್ಲಿರುವ ಪೊಳ್ಳು ಘೋಷಣೆಗಳಾಗಿವೆ. ‘ಗ್ಯಾರಂಟಿ’ ಪದವನ್ನು ಮೊದಲು ಬಳಸಿದ್ದು ನಾವು. ಅದನ್ನು ನೋಡಿ ಇತರ ಪಕ್ಷಗಳೂ ಬಳಸಲು ಆರಂಭಿಸಿದವು. ಆದರೆ ಅವರು ‘ಗ್ಯಾರಂಟಿ’ ಪದವನ್ನು ಅಪಮೌಲ್ಯಗೊಳಿಸಿದ್ದಾರೆ. ಆದರೆ, ಇದು ಕೇಜ್ರಿವಾಲ್ ಗ್ಯಾರಂಟಿಯಾಗಿದ್ದು, ಮೋದಿ ಅವರ ಗ್ಯಾರಂಟಿಯಂತೆ ಪೊಳ್ಳು ಅಲ್ಲ’ ಎಂದರು.

‘ದೆಹಲಿಯ ಎಲ್ಲ ಮನೆಗಳಿಗೂ ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಪೂರೈಕೆ, ಯಮುನಾ ನದಿ ಸ್ವಚ್ಛತೆ ಮತ್ತು ನಗರದ ಎಲ್ಲ ರಸ್ತೆಗಳನ್ನೂ ವಿಶ್ವದರ್ಜೆಗೆ ಏರಿಸುವ ಭರವಸೆಯನ್ನು ನೀಡಲಾಗಿದೆ. ಈ ಮೂರು ಭರವಸೆಗಳನ್ನು 2020 ರಲ್ಲೂ ನೀಡಲಾಗಿತ್ತು. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗದ್ದರಿಂದ, ಈ ಬಾರಿಯ ಪಟ್ಟಿಯಲ್ಲೂ ಸೇರಿಸಲಾಗಿದೆ’ ಎಂದರು.

ಪ್ರಮುಖ ಭರವಸೆಗಳು...

* ‘ಮಹಿಳಾ ಸಮ್ಮಾನ್‌ ಯೋಜನೆ’ಯಡಿ ಮಹಿಳೆಯರಿಗೆ ಮಾಸಿಕ ₹2100 ನೆರವು

* ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ ದೊರಕಿಸಿಕೊಡಲು ‘ಸಂಜೀವಿನಿ’ ಯೋಜನೆ ಜಾರಿ

* ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನ

* ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಮೆಟ್ರೊ ಪ್ರಯಾಣ ದರದಲ್ಲಿ ಶೇ 50ರಷ್ಟು ರಿಯಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.