ADVERTISEMENT

Delhi Result ಬಿಜೆಪಿ ಮತ ಪ್ರಮಾಣ ಜಿಗಿತ; ಎಎಪಿ ಇಳಿಕೆ, ಕಾಂಗ್ರೆಸ್‌ಗೂ ಅಲ್ಪ ಲಾಭ

ಪಿಟಿಐ
Published 9 ಫೆಬ್ರುವರಿ 2025, 2:00 IST
Last Updated 9 ಫೆಬ್ರುವರಿ 2025, 2:00 IST
<div class="paragraphs"><p>ಮತ ಪ್ರಮಾಣ</p></div>

ಮತ ಪ್ರಮಾಣ

   

(ಪಿಟಿಐ ಸಾಂಕೇತಿಕ ಚಿತ್ರ)

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, 26 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಹಿಡಿದಿದೆ. ಇದರೊಂದಿಗೆ ನಾಲ್ಕನೇ ಬಾರಿ ಅಧಿಕಾರಕ್ಕೇರುವ ಆಮ್ ಆದ್ಮಿ ಪಕ್ಷದ (ಎಎಪಿ) ಕನಸು ಕಮರಿದೆ.

ADVERTISEMENT

70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ಮತ್ತೊಂದೆಡೆ ಎಎಪಿ ಕೇವಲ 22 ಸ್ಥಾನಗಳಿಗೆ ಸೀಮಿತಗೊಂಡಿದೆ.

2015ರಲ್ಲಿ ಮೂರು, 2020ರಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದ್ದ ಕಮಲ ಪಕ್ಷ ಈ ಬಾರಿ 48 ಸ್ಥಾನಗಳನ್ನು ಗೆದ್ದು ಬಲವೃದ್ಧಿಸಿಕೊಂಡಿದೆ.

ಮತ್ತೊಂದೆಡೆ 2015 ಹಾಗೂ 2020ರಲ್ಲಿ ಅನುಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ಜಯಭೇರಿ ಮೊಳಗಿಸಿದ್ದ ಎಎಪಿ 22 ಸ್ಥಾನಗಳಿಗೆ ಇಳಿಕೆ ಕಂಡಿದೆ.

ಇನ್ನೊಂದೆಡೆ ಕಾಂಗ್ರೆಸ್ ಸತತ ಮೂರನೇ ಸಲವೂ ಒಂದೇ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ ಪ್ರಮಾಣದಲ್ಲೂ ಭಾರಿ ಏರಿಕೆ ಕಂಡಿದೆ. ಶೇ 7ರಷ್ಟು ಏರಿಕೆ ಕಂಡಿದೆ. ಮತ್ತೊಂದೆಡೆ ಎಎಪಿ ಮತ ಪ್ರಮಾಣ ಶೇ 10ರಷ್ಟು ಇಳಿಕೆ ಕಂಡಿದೆ. 'ಶೂನ್ಯ' ಸಾಧನೆಯ ನಡುವೆಯೂ ಕಾಂಗ್ರೆಸ್ ಮತ ಪ್ರಮಾಣ ಶೇ 2ರಷ್ಟು ಏರಿಕೆಯಾಗಿದೆ.

2020ರಲ್ಲಿ ಶೇ 53.57ರಷ್ಟಿದ್ದ ಎಎಪಿ ಮತ ಪ್ರಮಾಣವು ಶೇ 43.57ಕ್ಕೆ ಇಳಿಕೆಯಾಯಿತು. 2015ರಲ್ಲಿ ಎಎಪಿ ಶೇ 54.5ರಷ್ಟು ಮತ ಗಳಿಸಿತ್ತು.

ಈ ಬಾರಿ ಬಿಜೆಪಿ ಮತ ಪ್ರಮಾಣ ಶೇ 45.56ಕ್ಕೆ ಏರಿಕೆಯಾಗಿದೆ. 2020ರಲ್ಲಿ ಶೇ 38.51 ಮತ್ತು 2015ರಲ್ಲಿ ಶೇ 32.3 ಮತ ಪ್ರಮಾಣ ಗಳಿಸಿತ್ತು. ಆ ಮೂಲಕ ಪ್ರತಿ ಚುನಾವಣೆಯಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ.

ರಾಷ್ಟ್ರ ರಾಜಧಾನಿಯಲ್ಲಿ 1998ರಿಂದ 2013ರವರೆಗೆ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್, ಈ ಬಾರಿ ಶೇ 6.34ರಷ್ಟು ಮತ ಗಳಿಸಿದೆ. ಇದರೊಂದಿಗೆ ಮತ ಪ್ರಮಾಣ ಶೇ 2.1ರಷ್ಟು ವೃದ್ಧಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2020ರಲ್ಲಿ ಕಾಂಗ್ರೆಸ್ ಶೇ 4.3ರಷ್ಟು ಮತ ಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.