ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲೂ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
2015 ಹಾಗೂ 2020ರ ಚುನಾವಣೆಗಳಲ್ಲಿ ಭಾರಿ ಬಹುಮತದಿಂದ ಗೆದ್ದು ಆಡಳಿತ ನಡೆಸಿದ್ದ ಆಮ್ ಆದ್ಮಿ ಪಕ್ಷವು (ಎಎಪಿ), ಮತ್ತೊಮ್ಮೆ ಅಧಿಕಾರಕ್ಕೇರುವಲ್ಲಿ ವಿಫಲವಾಗಿದೆ.
ದೆಹಲಿ ವಿಧಾನಸಭೆಯಲ್ಲಿ ಒಟ್ಟು 70 ಸ್ಥಾನಗಳಿವೆ. 2015ರಲ್ಲಿ ಮೂರು, 2020ರಲ್ಲಿ ಎಂಟು ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ 48 ಸ್ಥಾನಗಳನ್ನು ಜಯಿಸಿ ಭಾರಿ ಬಹುಮತ ಸಾಧಿಸಿದೆ.
ಕಳೆದೆರಡು ಚುನಾವಣೆಗಳಲ್ಲಿ ಕ್ರಮವಾಗಿ 67 ಹಾಗೂ 62 ಸ್ಥಾನಗಳಲ್ಲಿ ವಿಜಯದ ಕೇಕೆ ಹಾಕಿದ್ದ ಎಎಪಿಗೆ, ದಕ್ಕಿರುವುದು 22 ಸ್ಥಾನಗಳಷ್ಟೇ.
ಇದು ಎಎಪಿ ಮುಖ್ಯಸ್ಥರೂ ಆಗಿರುವ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಮುಜುಗರವನ್ನುಂಟು ಮಾಡಿದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸತತ ಎರಡು ಬಾರಿ ಸೆಡ್ಡು ಹೊಡೆದಿದ್ದ ಆಪ್, ಇದೀಗ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿದೆ.
ಜನಾದೇಶವನ್ನು ಒಪ್ಪಿಕೊಳ್ಳುವುದಾಗಿ ಹಾಗೂ ಜನಸೇವೆಯನ್ನು ಮುಂದುವರಿಸುವುದಾಗಿ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ಗೆಲುವನ್ನು ಸಂಭ್ರಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಐತಿಹಾಸಿಕ ಜನಾದೇಶ ನೀಡಿದ್ದಕ್ಕಾಗಿ ದೆಹಲಿ ಜನರಿಗೆ ಧನ್ಯವಾದ ಹೇಳಿದ್ದಾರೆ. ಹಾಗೆಯೇ, ವಿಕಸಿತ ಭಾರತ ನಿರ್ಮಾಣದಲ್ಲಿ ದೆಹಲಿ ಪ್ರಮುಖ ಪಾತ್ರವಹಿಸಲಿದೆ. ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಿ ಹೊರಹೊಮ್ಮಲಿದೆ. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಪಕ್ಷವು ಒಂದೂ ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. 2013ರಲ್ಲಿ 8 ಸ್ಥಾನ ಜಯಿಸಿದ್ದ 'ಹಳೇ' ಪಕ್ಷಕ್ಕೆ ಸತತ ಮೂರನೇ ಬಾರಿಯೂ ಖಾತೆ ತೆರೆಯಲು ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.