ADVERTISEMENT

ಕೇಜ್ರಿವಾಲ್, ಸಿಸೋಡಿಯಾ ‘ಬಡೆ ಮಿಯಾ ಮತ್ತು ಚೋಟೆ ಮಿಯಾ’ ಇದ್ದಂತೆ: ಅಮಿತ್ ಶಾ ಟೀಕೆ

ದೆಹಲಿಗೆ ಎಎಪಿ ಕೇವಲ ಕಸ, ವಿಷಯುಕ್ತ ನೀರನ್ನು ನೀಡಿದೆ: ಶಾ ಕಿಡಿ

ಪಿಟಿಐ
Published 3 ಫೆಬ್ರುವರಿ 2025, 10:24 IST
Last Updated 3 ಫೆಬ್ರುವರಿ 2025, 10:24 IST
<div class="paragraphs"><p>ಅಮಿತ್ ಶಾ </p></div>

ಅಮಿತ್ ಶಾ

   

–ಪಿಟಿಐ ಚಿತ್ರ

ನವದೆಹಲಿ: ‘ಕಳೆದ 10 ವರ್ಷಗಳಲ್ಲಿ ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಹೊಂದಿರುವ ರಾಜ್ಯಗಳು ಹೆಚ್ಚು ಪ್ರಗತಿ ಸಾಧಿಸಿವೆ. ಆದರೆ, ದೆಹಲಿ ಹಿಂದುಳಿದಿದೆ. ದೆಹಲಿಯ ಮತದಾರರು ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಮನ್ನಣೆ ನೀಡಿರುವುದೇ ಇದಕ್ಕೆ ಕಾರಣ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

ADVERTISEMENT

ದೆಹಲಿ ವಿಧಾನಸಭಾ ಚುನಾವಣೆ ನಿಮಿತ್ತ ದಕ್ಷಿಣ ದೆಹಲಿಯ ಜಂಗ್‌ಪುರ ಕ್ಷೇತ್ರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ದೆಹಲಿಯನ್ನು ಲೂಟಿ ಮಾಡಿದ್ದಾರೆ. ಹಾಗಾಗಿ ಅವರನ್ನು ‘ಬಡೆ ಮಿಯಾ ಮತ್ತು ಚೋಟೆ ಮಿಯಾ’ ಎಂದು ಕರೆದರೆ ತಪ್ಪಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.

ಜಂಗ್‌ಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿರುವ ಮನೀಶ್ ಸಿಸೋಡಿಯಾ ಅವರು ಅಬಕಾರಿ ನೀತಿ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ದೇಶದ ಏಕೈಕ ಶಿಕ್ಷಣ ಸಚಿವರಾಗಿದ್ದಾರೆ ಎಂದು ಶಾ ಗುಡುಗಿದ್ದಾರೆ.

‘ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಹೊಂದಿರುವ ರಾಜ್ಯಗಳು ಕಳೆದ 10 ವರ್ಷಗಳಲ್ಲಿ ಪ್ರಗತಿ ಸಾಧಿಸಿವೆ. ದೆಹಲಿ ಹಿಂದುಳಿದಿದೆ. ಇದಕ್ಕೆ ಕಾರಣ ಎಎಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹೋರಾಡುತ್ತಿದ್ದು, 10 ವರ್ಷಗಳಿಂದ ಅಳುವ ಶಿಶುಗಳಂತೆ ವರ್ತಿಸುತ್ತಿದ್ದಾರೆ’ ಎಂದು ಶಾ ಲೇವಡಿ ಮಾಡಿದ್ದಾರೆ.

‘ಕೇಜ್ರಿವಾಲ್ ಅವರು ದೆಹಲಿಯ ಜನರಿಗೆ ಸದಾ ಸುಳ್ಳು ಹೇಳುವುದರಲ್ಲಿ ನಿರತರಾಗಿರುತ್ತಾರೆ. ರಾಷ್ಟ್ರ ರಾಜಧಾನಿಯನ್ನು ಅಭಿವೃದ್ಧಿ ಮಾಡುವ ಬದಲು ಕಸ, ವಿಷಕಾರಿ ನೀರು ಮತ್ತು ಭ್ರಷ್ಟಾಚಾರವನ್ನು ಕೊಡುಗೆಯಾಗಿ ನೀಡಿದ್ದಾರೆ’ ಎಂದು ಶಾ ಟೀಕಿಸಿದ್ದಾರೆ.

‌‘ಬಡೆ ಮಿಯಾ ಮತ್ತು ಚೋಟೆ ಮಿಯಾ’ (ಕೇಜ್ರಿವಾಲ್ ಮತ್ತು ಸಿಸೋಡಿಯಾ) ಸುಳ್ಳು ಭರವಸೆಗಳನ್ನು ನೀಡಿ ದೆಹಲಿಯನ್ನು ಲೂಟಿ ಮಾಡಿದ್ದಾರೆ. ಅವರಿಬ್ಬರೂ ಚುನಾವಣೆಯಲ್ಲಿ ಸೋಲಲಿದ್ದಾರೆ. ದೆಹಲಿಯನ್ನು ವಿಶ್ವ ದರ್ಜೆಯ ರಾಜಧಾನಿಯನ್ನಾಗಿ ಪರಿವರ್ತಿಸುವ ಏಕೈಕ ಪಕ್ಷ ಬಿಜೆಪಿ ಎಂದು ಅವರು ಹೇಳಿದ್ದಾರೆ.

70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.