ADVERTISEMENT

Delhi Polls | AAP ಗೆದ್ದರೆ ಸಿಸೋಡಿಯಾ ಮತ್ತೆ ಡಿಸಿಎಂ ಆಗಲಿದ್ದಾರೆ: ಕೇಜ್ರಿವಾಲ್

ಪಿಟಿಐ
Published 27 ಜನವರಿ 2025, 2:14 IST
Last Updated 27 ಜನವರಿ 2025, 2:14 IST
<div class="paragraphs"><p>ಮನೀಶ್ ಸಿಸೋಡಿಯಾ ಮತ್ತು&nbsp;ಅರವಿಂದ ಕೇಜ್ರಿವಾಲ್</p></div>

ಮನೀಶ್ ಸಿಸೋಡಿಯಾ ಮತ್ತು ಅರವಿಂದ ಕೇಜ್ರಿವಾಲ್

   

–ಪಿಟಿಐ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ (ಎಎಪಿ) ಗೆದ್ದರೆ, ಮನೀಶ್ ಸಿಸೋಡಿಯಾ ಅವರು ಮತ್ತೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ADVERTISEMENT

ಮನೀಶ್ ಸಿಸೋಡಿಯಾ ಅವರು ಸ್ಪರ್ಧಿಸುತ್ತಿರುವ ಜಂಗ್‌ಪುರ ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಜ್ರಿವಾಲ್ ಮಾತನಾಡಿದ್ದಾರೆ.

‘ಚುನಾವಣೆಯಲ್ಲಿ ಎಎಪಿ ಗೆದ್ದರೆ ಮನೀಶ್ ಸಿಸೋಡಿಯಾ ಅವರು ನಮ್ಮ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗುತ್ತಾರೆ. ಅವರೊಂದಿಗೆ ನೀವೆಲ್ಲರೂ ಉಪಮುಖ್ಯಮಂತ್ರಿಗಳಾಗುತ್ತೀರಿ. ಹಾಗಾಗಿ ಸಿಸೋಡಿಯಾ ಅವರನ್ನು ಅಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಕೇಜ್ರಿವಾಲ್ ಮನವಿ ಮಾಡಿದ್ದಾರೆ.

ಸಿಸೋಡಿಯಾ ಅವರು ಈ ಹಿಂದೆ ಪಟ್ಪರ್ ಗಂಜ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಜಂಗ್‌ಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

‘ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದರು. ಆದರೆ, ಅವರವರ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಎಂಟು ಶಾಸಕರು ತಮ್ಮ ಕ್ಷೇತ್ರಗಳನ್ನು ನರಕವನ್ನಾಗಿಸಿದ್ದಾರೆ’ ಎಂದು ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.

‘ಮನೀಶ್ ಸಿಸೋಡಿಯಾ ಮತ್ತು ನಾನು ಒಟ್ಟಾಗಿ ನಿಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಸರ್ಕಾರಿ ಶಾಲೆಗಳನ್ನು ಅತ್ಯುತ್ತಮವಾಗಿ ಅಭಿವೃದ್ಧಿಪಡಿಸಿದ್ದೇವೆ. ಈಗ ಬಿಜೆಪಿಯವರು ತಮ್ಮ ಸರ್ಕಾರ ರಚನೆಯಾದರೆ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುವುದಾಗಿ ಹೇಳುತ್ತಿದೆ. ನಿಮಗೆ (ಮತದಾರರಿಗೆ) ಸರ್ಕಾರಿ ಶಾಲೆಗಳನ್ನು ನಿರ್ಮಿಸುವ ಎಎಪಿ ಸರ್ಕಾರ ಬೇಕೇ ಅಥವಾ ಸರ್ಕಾರಿ ಶಾಲೆಗಳನ್ನು ಮುಚ್ಚುವ ಬಿಜೆಪಿ ಸರ್ಕಾರ ಬೇಕೇ ಎಂಬುದನ್ನು ಆಯ್ಕೆ ಮಾಡುವುದು ನಿಮಗೆ ಬಿಟ್ಟದ್ದು’ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಸೋಡಿಯಾ, ‘ನಾನು ಜಂಗ್‌ಪುರದಿಂದ ಗೆದ್ದರೆ, ಈ ಕ್ಷೇತ್ರದ ಪ್ರತಿಯೊಬ್ಬ ಸಹೋದರ–ಸಹೋದರಿಯರು ಉಪಮುಖ್ಯಮಂತ್ರಿಯಾಗುತ್ತಾರೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ತಡೆಯುವ ಧೈರ್ಯ ಯಾರಿಗೂ ಇರುವುದಿಲ್ಲ’ ಎಂದು ಹೇಳಿದ್ದಾರೆ.

ಜಂಗ್‌ಪುರದಲ್ಲಿ ಎಎಪಿ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದೆ. ಬಿಜೆಪಿಯಿಂದ ತರ್ವಿಂದರ್ ಸಿಂಗ್ ಮತ್ತು ಕಾಂಗ್ರೆಸ್ ಫರ್ಹಾದ್ ಸೂರಿ ಅವರನ್ನು ಕಣಕ್ಕಿಳಿಸಿದೆ. 70 ಸದಸ್ಯ ಬಲದ ದೆಹಲಿಯಲ್ಲಿ ಫೆಬ್ರುವರಿ 5ರಂದು ಮತದಾನ ನಡೆಯಲಿದ್ದು, ಫೆ.8ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಎಎಪಿ ಸರ್ಕಾರದ ಬಹುಪಾಲು ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿಸೋಡಿಯಾ ಅವರನ್ನು 2023ರ ಮಾರ್ಚ್‌ನಲ್ಲಿ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.