ADVERTISEMENT

ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರು ದೆಹಲಿ ಪೊಲೀಸ್ ವಶ; ಆರೋಪ ನಿರಾಕರಿಸಿದ ಎಎಪಿ

ಪಿಟಿಐ
Published 30 ಜನವರಿ 2025, 2:04 IST
Last Updated 30 ಜನವರಿ 2025, 2:04 IST
   

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಗೆ ಪ್ರಚಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರೊಂದನ್ನು ಜಪ್ತಿ ಮಾಡಲಾಗಿದ್ದು, ನಗದು, ಮದ್ಯ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಕರಪತ್ರಗಳನ್ನು ವಶಪಡಿಕೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ದೆಹಲಿ ಪೊಲೀಸ್ ತಿಳಿಸಿದೆ.

ನವದೆಹಲಿ ಜಿಲ್ಲೆಯಲ್ಲಿ ಪಂಜಾಬ್ ದಾಖಲಾತಿ ಹೊಂದಿರುವ ವಾಹನವನ್ನು ತಡೆಹಿಡಿಯಲಾಯಿತು. ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ದೆಹಲಿ ಪೊಲೀಸ್ ಹೇಳಿಕೆಯನ್ನು ಪಂಜಾಬ್ ಸರ್ಕಾರ ತಳ್ಳಿ ಹಾಕಿದೆ. ವಾಹನದ ನಂಬರ್ ಪ್ಲೇಟ್ ನಕಲಿಯಾಗಿದ್ದು, ಪಂಜಾಬ್ ಸರ್ಕಾರದ ಅಧೀನದಲ್ಲಿರುವ ಕಾರು ಅಲ್ಲ ಎಂದು ಸ್ಪಷ್ಟನೆ ನೀಡಿದೆ.

ADVERTISEMENT

ಎಎಪಿ ಕೂಡ ಕಾರು ಜಪ್ತಿ ಪ್ರಕರಣವನ್ನು ತಳ್ಳಿ ಹಾಕಿದೆ. ಇದೊಂದು ಸುಳ್ಳು ಆರೋಪವಾಗಿದ್ದು, ಉದ್ದೇಶಪೂರ್ವಕವಾಗಿ ತಂತ್ರ ಹೆಣೆಯಲಾಗಿದೆ. ಆದರೆ ಅದನ್ನು ಕಾರ್ಯಗತಗೊಳಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದೆ.

'ಕಾರಿನಲ್ಲಿ ಶೋಧ ನಡೆಸಿದಾಗ ನಗದು, ಮದ್ಯದ ಬಾಟಲಿ ಮತ್ತು ಎಎಪಿ ಕರಪತ್ರಗಳು ಲಭಿಸಿವೆ. ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ' ಎಂದು ದೆಹಲಿ ಪೊಲೀಸ್ ತಿಳಿಸಿದೆ.

'ಘಟನೆಗೆ ದೆಹಲಿಯ ಬಿಜೆಪಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ ಆಘಾತ ವ್ಯಕ್ತಪಡಿಸಿದ್ದು, ಪಂಜಾಬ್ ಸರ್ಕಾರಕ್ಕೆ ಸೇರಿದ ಕಾರಿನಿಂದ ₹10 ಲಕ್ಷ ನಗದು, ಮದ್ಯ ಮತ್ತು ಎಎಪಿ ಚುನಾವಣಾ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದೆಹಲಿ ರಾಜಕೀಯ ವ್ಯವಸ್ಥೆಯನ್ನು ಅರವಿಂದ ಕೇಜ್ರಿವಾಲ್ ಕಲುಷಿತಗೊಳಿಸಿದ್ದಾರೆ' ಎಂದು ಆರೋಪಿಸಿದ್ದಾರೆ.

'ನನ್ನ 35 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಗದು ಹಾಗೂ ಮದ್ಯ ವಸೂಲಿ ಮಾಡಿದ ಒಂದೇ ಒಂದು ಘಟನೆ ನೆನಪಿಲ್ಲ' ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.