ADVERTISEMENT

LS ಕ್ಷೇತ್ರಗಳ ಮರುವಿಂಗಡಣೆ | ಅಣ್ಣಾಮಲೈ ಮಾತಿಗಿಂತ ಮೋದಿ–ಶಾ ಮಾತು ಮುಖ್ಯ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 7:38 IST
Last Updated 23 ಮಾರ್ಚ್ 2025, 7:38 IST
<div class="paragraphs"><p>ಕೆ. ಅಣ್ಣಾಮಲೈ ಮತ್ತು ಡಿ.ಕೆ.ಶಿವಕುಮಾರ್</p></div>

ಕೆ. ಅಣ್ಣಾಮಲೈ ಮತ್ತು ಡಿ.ಕೆ.ಶಿವಕುಮಾರ್

   

ಚೆನ್ನೈ: ಜನಸಂಖ್ಯೆಯ ಆಧಾರದ ಮೇಲೆ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದ ದಕ್ಷಿಣ ರಾಜ್ಯಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿಕೆ ಕುರಿತು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿಗೆ ತೆರಳುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ಅಣ್ಣಾಮಲೈ ಮಾತಿಗಿಂತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮಾತು ಮುಖ್ಯ’ ಎಂದು ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಅಣ್ಣಾಮಲೈ ಅವರು ತಮ್ಮ ಪಕ್ಷಕ್ಕೆ ಹೆಚ್ಚಿನ ನಿಷ್ಠೆಯನ್ನು ತೋರಿಸಲು ಬಯಸಿದ್ದು, ಅದರಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ, ರಾಜ್ಯಕ್ಕೆ ನಿಷ್ಠೆ ತೋರಿಸುವುದನ್ನು ಮರೆತಿದ್ದಾರೆ’ ಎಂದು ಅವರು ಗುಡುಗಿದ್ದಾರೆ.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚಿಸಲು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಚೆನ್ನೈನಲ್ಲಿ ಆಯೋಜಿಸಿದ್ದ ಸಭೆಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಂದಿದ್ದರು.

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಪ್ರಕ್ರಿಯೆ ತಡೆಹಿಡಿದಿರುವುದನ್ನು 2026ರ ನಂತರ 25 ವರ್ಷಗಳವರೆಗೆ ಮುಂದುವರಿಸಬೇಕು ಎಂದು ಡಿಎಂಕೆ ನೇತೃತ್ವದ ಜಂಟಿ ಕ್ರಿಯಾ ಸಮಿತಿ (ಜೆಎಸಿ) ಸಭೆಯು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಈ ಆಗ್ರಹ ಇರುವ ಮನವಿಯನ್ನು ಸಂಸದರು ಒಟ್ಟಾಗಿ, ಈ ಸಂಸತ್ ಅಧಿವೇಶನದಲ್ಲಿಯೇ ಪ್ರಧಾನಿ ಮೋದಿ ಅವರಿಗೆ ಸಲ್ಲಿಸಬೇಕು ಎಂದು 14 ಪಕ್ಷಗಳ ಪ್ರತಿನಿಧಿಗಳು ಭಾಗಿಯಾಗಿದ್ದ ಸಭೆಯು ತೀರ್ಮಾನಿಸಿದೆ.

ಜನಸಂಖ್ಯೆಯ ಏರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿ ದೇಶದ ಬೆಳವಣಿಗೆಗೆ ಕೊಡುಗೆ ನೀಡಿದ ರಾಜ್ಯಗಳಿಗೆ ದಂಡ ವಿಧಿಸುವ ಕೆಲಸವನ್ನು ಮರುವಿಂಗಡಣೆ ಪ್ರಕ್ರಿಯೆ ಮಾಡಬಾರದು ಎಂದು ಸಭೆ ಒತ್ತಿಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.