ಪ್ರಧಾನಿ ನರೇಂದ್ರ ಮೋದಿ
(ಪಿಟಿಐ ಚಿತ್ರ)
ನವದೆಹಲಿ: ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರು ವೈದ್ಯರಿಗೆ ಶುಭಾಶಯ ಕೋರಿದ್ದು, ನಿಜವಾಗಿಯೂ ಆರೋಗ್ಯದ ರಕ್ಷಕರು ಮತ್ತು ಮಾನವೀಯತೆಯ ಆಧಾರಸ್ತಂಭಗಳು ಎಂದು ಬಣ್ಣಿಸಿದ್ದಾರೆ.
ವೈದ್ಯರ ದಿನದ ಪ್ರಯುಕ್ತ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ನಮ್ಮ ವೈದ್ಯರು ತಮ್ಮ ಕೌಶಲ್ಯ ಮತ್ತು ಶ್ರದ್ಧೆಯಿಂದ ಹೊಸ ಛಾಪು ಮೂಡಿಸಿದ್ದಾರೆ’ ಎಂದು ಹೇಳಿದ್ದಾರೆ.
‘ವೈದ್ಯರ ಸಹಾನುಭೂತಿಯ ಮನೋಭಾವವೂ ಅತ್ಯಂತ ಗಮನಾರ್ಹವಾಗಿದೆ. ಅವರು (ವೈದ್ಯರು) ನಿಜವಾಗಿಯೂ ಆರೋಗ್ಯದ ರಕ್ಷಕರು ಮತ್ತು ಮಾನವೀಯತೆಯ ಆಧಾರಸ್ತಂಭಗಳಾಗಿದ್ದಾರೆ. ಭಾರತದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ಅವರ ಕೊಡುಗೆ ನಿಜಕ್ಕೂ ಅಸಾಧಾರಣವಾಗಿದೆ’ ಎಂದು ತಿಳಿಸಿದ್ದಾರೆ.
‘ತಮ್ಮ ಬರುವ ರೋಗಿ ಬಡವನೋ, ಶ್ರೀಮಂತನೋ, ಕೆಳ ಜಾತಿಯವನೋ, ಮೇಲ್ಜಾತಿಯವನೋ ಎಂಬ ಯಾವ ಪೂರ್ವಾಗ್ರಹಗಳಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವ, ಅದೇ ಕಾಳಜಿಯಿಂದ ಆರೈಕೆ ಮಾಡುವ ವೈದ್ಯರೇ ಕಣ್ಣಿಗೆ ಕಾಣುವ ದೇವರಿದ್ದಂತೆ. ಕೋವಿಡ್ ಸಾಂಕ್ರಾಮಿಕದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರಿಗೆ ಪುನರ್ಜನ್ಮ ನೀಡಿದ ವೈದ್ಯರ ಸೇವೆಯನ್ನು ಈ ದಿನ ನಾವೆಲ್ಲರೂ ಸ್ಮರಿಸಲೇಬೇಕು. ಹಗಲಿರುಳೆನ್ನದೆ ಜನರ ಪ್ರಾಣ ರಕ್ಷಣೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲ್ಲಾ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ವೈದ್ಯೋ ನಾರಾಯಣೋ ಹರಿ’ ಈ ಮಾತಿಗೆ ಅನ್ವರ್ಥವಾಗಿ ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ದುಡಿಯುತ್ತಿರುವ ಎಲ್ಲಾ ವೈದ್ಯರಿಗೂ ರಾಷ್ಟ್ರೀಯ ವೈದ್ಯರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ವೈದ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ್ದ ಡಾ. ಬಿ.ಸಿ.ರಾಯ್ ಅವರ ಸ್ಮರಣಾರ್ಥ ಪ್ರತಿವರ್ಷ ಜುಲೈ 1ರಂದು ರಾಷ್ಟ್ರೀಯ ವೈದ್ಯ ದಿನವನ್ನು ಆಚರಿಸಲಾಗುತ್ತದೆ. ರಾಯ್ ಅವರು ವೈದ್ಯರು, ಶಿಕ್ಷಣ ತಜ್ಞ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದವರು. 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರಿಗೆ ಚಿಕಿತ್ಸೆ ನೀಡಿದವರು ಕೂಡ ರಾಯ್ ಅವರೇ ಎಂಬುದು ಗಮನಾರ್ಹ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮದಿನದ ಸ್ಮರಣಾರ್ಥ ದೇಶದಾದ್ಯಂತ 1991ರಿಂದ ಜುಲೈ 1ರಂದು ‘ವೈದ್ಯರ ದಿನ’ ಆಚರಿಸಲಾಗುತ್ತಿದೆ.
ಡಾ. ಬಿ.ಸಿ.ರಾಯ್ ಅವರು ದೇಶ ಕಂಡ ಅತ್ಯುತ್ತಮ ವೈದ್ಯರಷ್ಟೇ ಅಲ್ಲದೆ ಒಬ್ಬ ನುರಿತ ಆಡಳಿತಗಾರರಾಗಿದ್ದರು. ಸ್ವಾತಂತ್ರ್ಯ ಹೊರಾಟಗಾರರಾಗಿದ್ದ ಅವರು, ಸುದೀರ್ಘ ಅವಧಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ನಿಷ್ಠೆಯ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸಿದರು. ಜೊತೆಗೆ, ಪ್ರತಿದಿನ ಎರಡು ಗಂಟೆ ರೋಗಿಗಳ ತಪಾಸಣೆಯ ಮೂಲಕ ತಮ್ಮ ಮೂಲ ವೃತ್ತಿಯನ್ನೂ ಕಾಪಿಟ್ಟುಕೊಂಡು ಬಂದಿದ್ದರು. ಅವರ ಈ ಅನನ್ಯ ಸೇವೆ ಮನಗಂಡು 1961ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಲಾಗಿದೆ. ಡಾ.ಬಿ.ಸಿ.ರಾಯ್ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‍ಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.