ADVERTISEMENT

ರಿಹಾನಾ ಯಾರೆಂಬುದು ಗೊತ್ತಿಲ್ಲ, ಬೆಂಬಲಿಸಿದರೆ ಸಮಸ್ಯೆ ಏನಿದೆ? ಟಿಕಾಯತ್ ಪ್ರಶ್ನೆ

ಪಿಟಿಐ
Published 5 ಫೆಬ್ರುವರಿ 2021, 1:29 IST
Last Updated 5 ಫೆಬ್ರುವರಿ 2021, 1:29 IST
ರೈತ ಮುಖಂಡ ರಾಕೇಶ್ ಟಿಕಾಯತ್
ರೈತ ಮುಖಂಡ ರಾಕೇಶ್ ಟಿಕಾಯತ್   

ನವದಹೆಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರೈತರು ದೆಹಲಿ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ದೊರಕುತ್ತಿರುವ ಜಾಗತಿಕ ಬೆಂಬಲವನ್ನು ಭಾರತೀಯ ಕಿಸಾನ್ ಒಕ್ಕೂಟ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಸ್ವಾಗತಿಸಿದರು.

ಅದೇ ಸಂದರ್ಭದಲ್ಲಿ ತಮಗೆ ಪಾಪ್ ಗಾಯಕಿ ರಿಹಾನಾ ಅಂದರೆ ಯಾರೂ ಎಂಬುದು ಗೊತ್ತಿಲ್ಲ ಎಂಬುದನ್ನು ಒಪ್ಪಿಕೊಂಡರು. ಹಾಗಿದ್ದರೂ ವಿದೇಶದ ಸೆಲೆಬ್ರಿಟಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸಿದರೆ ಸಮಸ್ಯೆ ಏನಿದೆ ಎಂದು ಪ್ರಶ್ನಿಸಿದರು.

ನವೆಂಬರ್ 26ರಿಂದಲೇ ದೆಹಲಿ ಗಡಿ ಪ್ರದೇಶಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಗಣರಾಜ್ಯೋತ್ಸವ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರದ ಬಳಿಕ ಇಂಟರ್‌ನೆಟ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಡಿತಗೊಳಿಸಲಾಗಿತ್ತು. ಈ ಬಗ್ಗೆ ಅಮೆರಿಕದ ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ್ದರು.

ADVERTISEMENT

ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಸಹ ರೈತರ ಹೋರಾಟಕ್ಕೆ ಬೆಂಬಲವನ್ನು ಸೂಚಿಸಿದ್ದರು. ಅವರು ಕೂಡಾ ಯಾರು ಎಂಬುದು ತಮಗೆ ಗೊತ್ತಿಲ್ಲ ಎಂದು ರಾಕೇಶ್ ಟಿಕಾಯತ್ ತಿಳಿಸಿದರು.

ಅವರೆಲ್ಲರು ನಮ್ಮನ್ನು ಬೆಂಬಲಿಸಿರಬಹದು. ಆದರೆ ವಿದೇಶಿ ಕಲಾವಿದರು ಯಾರು ಎಂಬುದು ಗೊತ್ತಿಲ್ಲ. ವಿದೇಶಿಯರು ಪ್ರತಿಭಟನೆಯನ್ನು ಬೆಂಬಲಿಸಿದರೆ, ಸಮಸ್ಯೆ ಏನಿದೆ? ಅವರು ನಮಗೇನು ಕೊಡುತ್ತಿಲ್ಲ ಅಥವಾ ನಮ್ಮಿಂದ ಏನನ್ನೂ ಕಸಿದುಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಗುರುವಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿರೋಧ ಪಕ್ಷದ 15 ಸಂಸದರನ್ನು ಭೇಟಿ ಮಾಡಲು ಪೊಲೀಸರು ತಡೆಯೊಡ್ಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಕಾಯತ್, ರೈತರನ್ನು ಉದ್ದೇಶಿಸಿ ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.