
ಹೈದರಾಬಾದ್: ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಮತದಾರರಿಗೆ ಹಂಚಿದ್ದ ಹಣ ಮತ್ತು ಪ್ರೆಷರ್ ಕುಕ್ಕರ್‌ಗಳನ್ನು ವಾಪಸ್ ಕೇಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಇತ್ತೀಚೆಗೆ ನಡೆದ ತೆಲಂಗಾಣದ ಅಶ್ವರಾವ್ ಪೇಟ 10ನೇ ವಾರ್ಡ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸೋಲು ಅನುಭವಿಸಿದ್ದಾರೆ. ಅಭ್ಯರ್ಥಿ, ಮತದಾರರಿಗೆ ಆಮಿಷವಾಗಿ ನೀಡಿದ್ದ ಹಣ ಮತ್ತು ವಸ್ತುಗಳನ್ನು ವಾಪಸ್ ಕೇಳಿದ್ದಾರೆ. ನೀವು ಮತ ಹಾಕಿಲ್ಲ ಎಂದ ಮೇಲೆ ನಮ್ಮ ಹಣ ಮತ್ತು ವಸ್ತುಗಳು ಏಕೆ? ವಾಪಸ್ ನೀಡಿ ಎಂದು ಮತದಾರರ ಬಾಗಿಲಿಗೆ ಹೋಗಿ ಪೀಡಿಸಿದ್ದಾರೆ. ಇದರಿಂದ ಮತದಾರರು ಕಿರಿಕಿರಿ ಅನುಭವಿಸಿದ್ದಾರೆ.
ಮತದಾರರು ರಸ್ತೆಯಲ್ಲಿ ಪ್ರೆಷರ್ ಕುಕ್ಕರ್‌ಗಳನ್ನು ಇಟ್ಟು ಪ್ರತಿಭಟಿಸಿದ್ದಾರೆ. ನಾವೇನು ಅವರ ಮನೆ ಬಾಗಿಲಿಗೆ ಹೋಗಿ ಹಣ, ವಸ್ತುಗಳನ್ನು ಕೇಳಿರಲಿಲ್ಲ. ಚುನಾವಣೆಯಲ್ಲಿ ಸೋಲು ಉಂಟಾದ್ದರಿಂದ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮಧ್ಯೆ ಮತದಾರರು ನಡೆಸಿದ ಪ್ರತಿಭಟನೆ ತೀವ್ರ ಸ್ವರೂಪಕ್ಕೆ ತಿರುಗಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಇಂತಹ ಚಟುವಟಿಕೆಗಳು ನಡೆದಿವೆ ಎಂದು ಜನರು ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.