
ಕೋಲ್ಕತ್ತ: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ರೈಲು ಡಿಕ್ಕಿ ಹೊಡೆದು ಆನೆಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ವರದಿ ಕೇಳಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಭಾನುವಾರ ತಿಳಿಸಿದರು.
ಆನೆ ಮತ್ತು ಹುಲಿ ಸಂರಕ್ಷಣೆ ಯೋಜನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈಲ್ವೆ ಹಳಿಯುದ್ದಕ್ಕೂ ಆನೆಗಳ ಚಲನವಲನದ ಮೇಲೆ ಕಣ್ಗಾವಲಿಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಲಾಗಿದೆ’ ಎಂದರು.
ರೈಲ್ವೆ ಹಳಿಯುದ್ದಕ್ಕೂ ಆನೆಗಳ ಚಲನವಲನ ಕುರಿತಂತೆ ರಾಜ್ಯಗಳ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಲೋಕೊ ಪೈಲಟ್ ಮತ್ತು ಅರಣ್ಯ ಅಧಿಕಾರಿಗಳ ಮಧ್ಯೆ ಪರಸ್ಪರ ಸಹಕಾರವೂ ಅಗತ್ಯ ಎಂದು ಹೇಳಿದರು.
ಶನಿವಾರ ತಡರಾತ್ರಿ ಸಾಯಿರಂಗ್–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ಏಳು ಆನೆಗಳು ಮೃತಪಟ್ಟಿವೆ.
ಮತ್ತೊಂದು ಆನೆ ಸಾವು
ನಾಗಾಂವ್: ರೈಲು ಡಿಕ್ಕಿ ಸಂದರ್ಭದಲ್ಲಿ ಗಾಯಗೊಂಡಿದ್ದ ಇನ್ನೊಂದು ಆನೆಯ ಮರಿಯೂ ಮೃತಪಟ್ಟಿದೆ. ಇದರೊಂದಿಗೆ ದುರಂತದಲ್ಲಿ ಮೃತಪಟ್ಟ ಆನೆಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮೃತಪಟ್ಟ ಆನೆಗಳನ್ನು ಅವಘಡ ನಡೆದ ಸ್ಥಳದ ಸಮೀಪದಲ್ಲೇ ಹೂಳಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.