ಕಾರು ಅಪಘಾತಕ್ಕೀಡಾಗಿರುವ ದೃಶ್ಯ
ಮುಂಬೈ: ಗೂಗಲ್ ಮ್ಯಾಪ್ ಮಾಹಿತಿ ಅನುಸರಿಸಿ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರ ಕಾರು ಕಂದಕಕ್ಕೆ ಬಿದ್ದಿರುವ ಘಟನೆ ನವಿ ಮುಂಬೈಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಗೂಗಲ್ ಮ್ಯಾಪ್ ನೆರವಿನಿಂದ ಮಹಿಳೆ ಕಾರು ಚಲಾಯಿಸಿಕೊಂಡು ಬೇಲಾಪುರದ ಸೇತುವೆ ಮೂಲಕ ಉಲ್ವೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ನೀರಿನಲ್ಲಿ ತೇಲುತ್ತಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ್ದೇವೆ. ಆಕೆ ಸುರಕ್ಷಿತವಾಗಿದ್ದು, ಕ್ರೇನ್ ಮೂಲಕ ಕಾರನ್ನು ಹಳ್ಳದಿಂದ ಹೊರತೆಗೆಯಲಾಗಿದೆ ಎಂದು ಕಡಲ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಏಕಾಏಕಿ ತಿರುವು ತೆಗೆದುಕೊಂಡ ಕಾರಣ ಕಾರು ಸೇತುವೆಯಿಂದ ನದಿಗೆ ಉರುಳಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗೂಗಲ್ ಮ್ಯಾಪ್ ಜನರನ್ನು ದಾರಿ ತಪ್ಪಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವುದು ಇದೇ ಮೊದಲಲ್ಲ.
ಕಳೆದ ವರ್ಷ ಉತ್ತರ ಪ್ರದೇಶದ ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ಪ್ರಯಾಣಿಸುತ್ತಿದ್ದ ಮೂವರು ಸ್ನೇಹಿತರು ಗೂಗಲ್ ಮ್ಯಾಪ್ ನೆರವಿನಿಂದ ಕಾರು ಚಲಾಯಿಸಿಕೊಂಡು ಅಪೂರ್ಣ ಸೇತುವೆ ಮೇಲೆ ಹೋಗಿ, ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದರು.
ಮತ್ತೊಂದು ಘಟನೆಯಲ್ಲಿ ಕೊಚ್ಚಿಯ ಪರವೂರಿನ ಗೋತುರುತ್ತ್ ಬಳಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ತಿರುವು ತೆಗೆದುಕೊಂಡ ಪರಿಣಾಮ ಕಾರು ನದಿಗೆ ಉರುಳಿತ್ತು. ಘಟನೆಯಲ್ಲಿ ಇಬ್ಬರು ಯುವ ವೈದ್ಯರು ಮೃತಪಟ್ಟಿದ್ದರು. ಎಂಬಿಬಿಎಸ್ ವಿದ್ಯಾರ್ಥಿ ಸೇರಿದಂತೆ ಕಾರಿನಲ್ಲಿದ್ದ ಇತರ ಮೂವರನ್ನು ರಕ್ಷಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.