ADVERTISEMENT

ವಿಶ್ವ ಸುಂದರಿ ಸ್ಪರ್ಧಿಗಳ ಕಾಲು ತೊಳೆದ ಮಹಿಳೆ: ತೆಲಂಗಾಣ ಸರ್ಕಾರದ ವಿರುದ್ಧ ಟೀಕೆ

ಪಿಟಿಐ
Published 15 ಮೇ 2025, 14:20 IST
Last Updated 15 ಮೇ 2025, 14:20 IST
<div class="paragraphs"><p>ಮಿಸ್ ವರ್ಲ್ಡ್ ಸ್ಪರ್ಧಿಗಳ&nbsp;ಪಾದಗಳನ್ನು ತೊಳೆಯಲು  ಮಹಿಳೆಯೊಬ್ಬರು ಸಹಾಯ ಮಾಡುತ್ತಿರುವ ದೃಶ್ಯ</p></div>

ಮಿಸ್ ವರ್ಲ್ಡ್ ಸ್ಪರ್ಧಿಗಳ ಪಾದಗಳನ್ನು ತೊಳೆಯಲು ಮಹಿಳೆಯೊಬ್ಬರು ಸಹಾಯ ಮಾಡುತ್ತಿರುವ ದೃಶ್ಯ

   

Credit: X/@kishanreddybjp

ಹೈದರಾಬಾದ್: ಇಲ್ಲಿನ ರಾಮಪ್ಪ ದೇವಸ್ಥಾನದಲ್ಲಿ ವಿಶ್ವ ಸುಂದರಿ ಸ್ಪರ್ಧಿಗಳು ಕಾಲು ತೊಳೆದುಕೊಳ್ಳಲು ಕೆಲವು ಮಹಿಳೆಯರು ಸಹಾಯ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ADVERTISEMENT

ಇದು ತೆಲಂಗಾಣ ಮಹಿಳೆಯರಿಗೆ ಮಾಡಿದ ಅವಮಾನ ಎಂದು ಬಿಜೆಪಿ ಮತ್ತು ಬಿಆರ್‌ಎಸ್ ಪಕ್ಷಗಳು ಟೀಕಿಸಿವೆ.

ಪರಂಪರೆಯ ಪ್ರವಾಸದ ಭಾಗವಾಗಿ ಸೀರೆ ಧರಿಸಿದ್ದ ಸ್ಪರ್ಧಿಗಳು ಯುನೆಸ್ಕೊ ವಿಶ್ವ ಪಾರಂಪರಿಕವಾದ ರಾಮಪ್ಪ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾಲಾಗಿ ಕುಳಿತಿದ್ದ ಸ್ಪರ್ಧಿಗಳ ಕಾಲುಗಳ ಮೇಲೆ ಕೆಲವು ಮಹಿಳೆಯರು ನೀರು ಹಾಕುತ್ತಿರುವುದು ಮತ್ತು ಒಬ್ಬ ಮಹಿಳೆ ಸ್ಪರ್ಧಿಯೊಬ್ಬರ ಕಾಲನ್ನು ಟವಲ್‌ನಿಂದ ಒರೆಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದ್ದು, ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಸ್ಥಳೀಯ ದಲಿತ, ಬುಡಕಟ್ಟು ಮತ್ತು ಆರ್ಥಿಕವಾಗಿ ಹಿಂದುಳಿದ ಮಹಿಳೆಯರನ್ನು ಸ್ಪರ್ಧಿಗಳ ಕಾಲು ತೊಳೆದು, ಒರೆಸುವಂತೆ ಬಲವಂತ ಮಾಡಲಾಗಿದೆ. ಇದಕ್ಕೆ ರಾಜ್ಯದಾದ್ಯಂತ ವಿರೋಧ ವ್ಯಕ್ತವಾಗಿದೆ ಎಂದು ಬಿಆರ್‌ಎಸ್‌ ತಿಳಿಸಿದೆ. 

ಈ ವಿಡಿಯೊವನ್ನು ತನ್ನ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್, ‘ಕಾಂಗ್ರೆಸ್ ಮುಖ್ಯಮಂತ್ರಿ ಅಧಿಕೃತವಾಗಿ ಮಾನಸಿಕ ಅಸ್ವಸ್ಥರಾಗಿದ್ದಾರೆ’ ಎಂದು ಹೇಳಿದ್ದಾರೆ. 

‘ರುದ್ರಮಾದೇವಿ, ಸಾಮ್ಮಕ್ಕಾ ಮತ್ತು ಸರಳಕ್ಕ ರೀತಿಯ ಮಹಿಳೆಯರಿಗೆ ಜನ್ಮ ನೀಡಿದ ತೆಲಂಗಾಣದ ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನವಿದು’ ಎಂದು ಮಾಜಿ ಸಚಿವ ಮತ್ತು ಬಿಆರ್‌ಎಸ್ ಶಾಸಕಿ ಸವಿತಾ ಇಂದ್ರಾರೆಡ್ಡಿ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. 

ತಮ್ಮ ಹೈಕಮಾಂಡ್ ಅನ್ನು ಮೆಚ್ಚಿಸಲು ವಿದೇಶಿಗರ ಎದುರು ಭಾರತೀಯರು ಮೊಣಕಾಲೂರುವಂತೆ ಮಾಡುವುದು ಕಾಂಗ್ರೆಸ್ ಪಕ್ಷದ ಶತಮಾನದ ಕೊಡುಗೆಯಾಗಿದೆ. ಇದೀಗ ತಮ್ಮ ದೆಹಲಿಯ ದೊರೆಗಳನ್ನು ಓಲೈಸಲು ಭಾರತದ ಮಹಿಳೆಯರ ಸ್ವಗೌರವ ಮತ್ತು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ ಎಂದು ಬಿಜೆಪಿಯ ತೆಲಂಗಾಣ ಘಟಕದ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  

‘ಈ ಘಟನೆ ಸಂಬಂಧ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ತೆಲಂಗಾಣ ಜನತೆಯ ಬೇಷರತ್ ಕ್ಷಮೆ ಕೋರಬೇಕು’ ಎಂದು ಒತ್ತಾಯಿಸಿದರು. 

ಈ ಟೀಕೆಗಳಿಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಸರ್ಕಾರವು, ‘ಅತಿಥಿ ದೇವೋಭವ’ ಎಂಬ ನಾಣ್ಣುಡಿಯಂತೆ ನಮ್ಮ ಅಂತರರಾಷ್ಟ್ರೀಯ ಅತಿಥಿಗಳಿಗೆ ಗೌರವ ಸಲ್ಲಿಸಿದ್ದೇವೆ. ಇದು ನಮ್ಮ ಸಂಪ್ರದಾಯ ಎಂದು ತಿರುಗೇಟು ನೀಡಿದೆ. 

ವಿಶ್ವ ಸುಂದರಿ ಗ್ರಾಂಡ್ ಫಿನಾಲೆಯು ಇದೇ 31ರಂದು ನಿಗದಿಯಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿರುವ 100ಕ್ಕೂ ಹೆಚ್ಚು ಸ್ಪರ್ಧಿಗಳು ತೆಲಂಗಾಣದಲ್ಲಿರುವ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.