ಚೆನ್ನೈ: ‘ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಅವಕಾಶ ನೀಡುವುದಿಲ್ಲ’ ಎಂಬುದನ್ನು ಪುನರುಚ್ಚರಿಸಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳು ಭಾಷೆ ಹಾಗೂ ರಾಜ್ಯದ ಸಂಸ್ಕೃತಿಯನ್ನು ರಕ್ಷಿಸುವುದಾಗಿ ಗುರುವಾರ ಪ್ರತಿಜ್ಞೆ ಮಾಡಿದರು.
ಕೇಂದ್ರ ಸರ್ಕಾರವು ‘ತ್ರಿಭಾಷಾ ಸೂತ್ರ’ದ ಹೆಸರಿನಲ್ಲಿ ಹಿಂದಿ ಭಾಷೆಯನ್ನು ಹೇರಿ, ಆ ಮೂಲಕ ಸಂಸ್ಕೃತ ಭಾಷೆಗೆ ಉತ್ತೇಜನ ನೀಡಲು ಮುಂದಾಗಿದೆ ಎಂದು ಅವರು ಆರೋಪಿಸಿದರು.
‘ಹಿಂದಿ ಹೇರಿಕೆ ವಿರೋಧಿಸುತ್ತೇವೆ. ಹಿಂದಿ ಎಂಬುದು ಮುಖವಾಡವಾಗಿದ್ದು, ಸಂಸ್ಕೃತ ಭಾಷೆಯೇ ಅದರ ಹಿಂದಿನ ನಿಜವಾದ ಮುಖ’ ಎಂದು ಪಕ್ಷದ ಕಾರ್ಯಕರ್ತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಭಾಗವಾಗಿ ತ್ರಿಭಾಷಾ ಸೂತ್ರದ ಹೆಸರಿನಲ್ಲಿ ಕೇಂದ್ರ ಸರ್ಕಾರವು ಹಿಂದಿ ಹೇರಲು ಮುಂದಾಗಿದೆ ಎಂದು ಆಡಳಿತಾರೂಢ ಡಿಎಂಕೆ ಆರೋಪಿಸುತ್ತಾ ಬಂದಿದೆ. ಆದರೆ ಕೇಂದ್ರ ಸರ್ಕಾರವು ಈ ಆರೋಪವನ್ನು ಅಲ್ಲಗಳೆದಿದೆ. ಈ ವಿಷಯದಲ್ಲಿ ಕೇಂದ್ರ ಮತ್ತು ತಮಿಳುನಾಡು ನಡುವೆ ತಿಕ್ಕಾಟ ನಡೆಯುತ್ತಿದೆ.
ಬಿಹಾರ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಮಾತನಾಡುವ ಮೈಥಿಲಿ, ಬ್ರಜಭಾಷೆ, ಬುಂದೇಲ್‌ಖಂಡಿ ಮತ್ತು ಅವಧಿ ಸೇರಿದಂತೆ ಹಲವು ಭಾಷೆಗಳು ‘ಹಿಂದಿ ಭಾಷೆಯ ಪ್ರಾಬಲ್ಯ’ ದಿಂದ ನಾಶವಾಗಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
‘ಹಿಂದಿ ಮತ್ತು ಸಂಸ್ಕೃತದ ಆಧಿಪತ್ಯದಿಂದಾಗಿ ಉತ್ತರ ಭಾರತದ 25ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು ನಾಶವಾಗಿವೆ. ಆದರೆ ಶತಮಾನದಷ್ಟು ಹಳೆಯದಾದ ದ್ರಾವಿಡ ಚಳುವಳಿಯು ಜನರಲ್ಲಿ ಮೂಡಿಸಿದ ಜಾಗೃತಿಯು ತಮಿಳು ಭಾಷೆ ಮತ್ತು ಅದರ ಸಂಸ್ಕೃತಿಯನ್ನು ಕಾಪಾಡಿದೆ’ ಎಂದಿದ್ದಾರೆ.
‘ತ್ರಿಭಾಷಾ ಸೂತ್ರ’ದ ಹೆಸರಿನಲ್ಲಿ ಕೇಂದ್ರವು ಹಲವು ರಾಜ್ಯಗಳಲ್ಲಿ ಸಂಸ್ಕೃತ ಭಾಷೆಯನ್ನು ಮಾತ್ರ ಉತ್ತೇಜಿಸುತ್ತಿದೆ. ಬಿಜೆಪಿ ಆಡಳಿತವಿರುವ ರಾಜಸ್ಥಾನದಲ್ಲಿ ಉರ್ದು ಶಿಕ್ಷಕರ ಬದಲು ಸಂಸ್ಕೃತ ಶಿಕ್ಷಕರನ್ನು ಮಾತ್ರ ನೇಮಕ ಮಾಡಿಕೊಳ್ಳುತ್ತಿದೆ’ ಎಂದು ದೂರಿದರು.
ಕೇಂದ್ರ ಸರ್ಕಾರವು ಶಿಕ್ಷಣ ನೀತಿ ಮೂಲಕ ಹಿಂದಿ ಮತ್ತು ಸಂಸ್ಕೃತವನ್ನು ಹೇರಲು ಪ್ರಯತ್ನಿಸುತ್ತಿರುವುದರಿಂದ ಎನ್‌ಇಪಿಯನ್ನು ವಿರೋಧಿಸುತ್ತೇವೆಎಂ.ಕೆ.ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.