ADVERTISEMENT

ನದಿಯ ದಡದಲ್ಲೇ ಬುಡಕಟ್ಟು ಮಹಿಳೆಗೆ ಹೆರಿಗೆ: ಗೃಹರಕ್ಷಕ ದಳ ಸಿಬ್ಬಂದಿಯ ನೆರವು

ಛತ್ತೀಸಗಡ

ಪಿಟಿಐ
Published 18 ಜುಲೈ 2022, 5:24 IST
Last Updated 18 ಜುಲೈ 2022, 5:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಿಜಾಪುರ (ಛತ್ತೀಸಗಡ): ನಿರಂತರ ಮಳೆಯಿಂದ ತತ್ತರಿಸಿರುವ ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಬುಡಕಟ್ಟು ಮಹಿಳೆಯೊಬ್ಬರು ನದಿ ದಡದಲ್ಲಿಯೇ ಮಗುವಿಗೆ ಭಾನುವಾರ ಜನ್ಮ ನೀಡಿದ್ದಾರೆ. ಅವರಿಗೆ ಗೃಹ ರಕ್ಷಣಾ ದಳದ ಸಿಬ್ಬಂದಿ ನೆರವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಯೊಬ್ಬರು,ಜಿಲ್ಲೆಯ ಗಂಗಲೂರು ತಹಸಿಲ್‌ನ ಜೋರ್ಗಯಾಗ್ರಾಮದುದ್ದಕ್ಕೂ ಹರಿಯುವ ನದಿಯನ್ನು ದಾಟಿ, ಉಪ ಆರೋಗ್ಯ ಕೇಂದ್ರಕ್ಕೆ ತಲುಪಬೇಕಿದೆ. ಸಹಾಯ ಮಾಡಿ ಎಂದು ಗರ್ಭಿಣಿ ಸರಿತಾ ಗೊಂಗ್ಡಿ ಅವರ ಕುಟುಂಬದವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ನದಿ ಉಕ್ಕಿ ಹರಿಯುತ್ತಿದೆ.ಹೀಗಾಗಿ,ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಗೃಹ ರಕ್ಷಕ ಸಿಬ್ಬಂದಿಗೆ, ಈವಿಚಾರವನ್ನು ತಿಳಿಸಲಾಗಿತ್ತು ಎಂದು ಹೇಳಿದ್ದಾರೆ.

ಮುಂದುವರಿದು, ಕುಟುಂಬದವರೇಗೊಂಗ್ಡಿ ಅವರನ್ನು ಬಿದಿರಿನ ಸ್ಟ್ರೆಚರ್‌ನಲ್ಲಿ ನದಿ ದಡಕ್ಕೆ ಕರೆತಂದಿದ್ದರು. ಸ್ಥಳಕ್ಕಾಗಮಿಸಿದ ರಕ್ಷಣಾ ದಳ, ಮಹಿಳೆಯನ್ನು ಬೋಟ್‌ ಮೂಲಕ ಕರೆದೊಯ್ಯಲು ಪ್ರಯತ್ನಿಸಿದೆ. ಆದರೆ, ಅಷ್ಟರಲ್ಲಾಗಲೇ ಮಹಿಳೆಗೆಹೆರಿಗೆ ನೋವು ಕಾಣಿಸಿಕೊಂಡಿತ್ತು. ಗೊಂಗ್ಡಿ ಅವರು ಸ್ಟ್ರೆಚರ್‌ನಲ್ಲಿದ್ದಾಗಲೇ ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ, ಮಗುವನ್ನೂ ರಕ್ಷಣಾ ಕಾರ್ಯಾಚರಣೆಯ ಬೋಟ್‌ನಲ್ಲಿ ರೆಡ್ಡಿ ಗ್ರಾಮದ ಉಪ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಇಬ್ಬರೂ ಕ್ಷೇಮವಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ನಿರಂತರವಾಗಿ ಮಳೆ ಹಾಗೂ ಛತ್ತೀಸಗಡ ಮತ್ತು ತೆಲಂಗಾಣದ ಗಡಿಯಲ್ಲಿ ಹರಿಯುವ ಗೋದಾವರಿ ನದಿಯ ಹಿನ್ನೀರಿನಿಂದಾಗಿ ಬಿಜಾಪುರ, ದಾಂತೇವಾಡ, ಸುಕ್ಮಾ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.

ಕೈಗಾರಿಕೆ ಸಚಿವ ಕವಾಸಿ ಲಖ್ಮಾ ಅವರು ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿದ್ದಾರೆ.

ತುರ್ತು ಪರಿಸ್ಥಿತಿ ನಿಭಾಯಿಸಲು ರಕ್ಷಣಾ ತಂಡಗಳನ್ನು ಸಜ್ಜಾಗಿ ಇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಂತ್ರಸ್ತರಿಗೆ ನೆರವಾಗುವಂತೆ ಇತರ ಇಲಾಖೆಗಳಿಗೂ ಮನವಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.