ತೇಜಸ್ವಿ ಯಾದವ್ ಹಾಗೂ ನರೇಂದ್ರ ಮೋದಿ (ಒಳಚಿತ್ರದಲ್ಲಿ)
ಪಿಟಿಐ ಚಿತ್ರಗಳು
ಪಟ್ನಾ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ಗಳು ಉಭಯ ರಾಷ್ಟ್ರಗಳಲ್ಲಿ ಆಡಬೇಕು ಎಂಬುದನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯು ಪಾಕಿಸ್ತಾನದಲ್ಲಿ 2025ರ ಫೆಬ್ರುವರಿಯಲ್ಲಿ ಆಯೋಜನೆಗೊಳ್ಳಲಿದೆ. ಆದರೆ, ಭದ್ರತಾ ಕಾರಣಗಳಿಂದಾಗಿ, ಅಲ್ಲಿಗೆ ತಂಡವನ್ನು ಕಳುಹಿಸಲು ಬಿಸಿಸಿಐ ನಿರಾಕರಿಸಿದೆ. ಈ ಸಂಬಂಧ ತೇಜಸ್ವಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಲಾಹೋರ್‌ಗೆ ದಿಢೀರ್ ಭೇಟಿ ನೀಡಿದ್ದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
'ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡಬಾರದು. ಪ್ರಧಾನಿ ಮೋದಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಬಹುದು ಮತ್ತು ನವಾಜ್ ಷರೀಫ್ (ಪಾಕಿಸ್ತಾನದ ಆಗಿನ ಪ್ರಧಾನಿ) ಅವರೊಂದಿಗೆ ಬಿರಿಯಾನಿ ಹಂಚಿಕೊಂಡು ತಿನ್ನಬಹುದು ಎಂದಾದರೆ, ಉಭಯ ದೇಶಗಳ ಕ್ರಿಕೆಟ್ ತಂಡಗಳು ಪರಸ್ಪರ ಪ್ರವಾಸ ಕೈಗೊಳ್ಳುವುದರಿಂದ ಆಗುವ ಹಾನಿ ಏನು?' ಎಂದು ಕೇಳಿದ್ದಾರೆ.
'ಉಭಯ ರಾಷ್ಟ್ರಗಳ ತಂಡಗಳು ಪ್ರವಾಸ ಕೈಗೊಳ್ಳುವುದರಿಂದ, ಎರಡೂ ರಾಷ್ಟ್ರಗಳ ಜನರ ನಡುವಣ ಸಂಬಂಧ ಉತ್ತಮಗೊಳ್ಳಲಿದೆ' ಎಂದು ಪ್ರತಿಪಾದಿಸಿದ್ದಾರೆ.
ರಾಜಕೀಯದಲ್ಲಿ ತೊಡಗಿಕೊಳ್ಳುವ ಮುನ್ನ ಕ್ರಿಕೆಟಿಗರಾಗಿದ್ದ ತೇಜಸ್ವಿ, ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಡೇರ್‌ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.