ಪ್ರಾತಿನಿಧಿಕ ಚಿತ್ರ
ನವದೆಹಲಿ: ಶ್ರೀನಗರ, ಅಮೃತಸರ ಸೇರಿದಂತೆ ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ 32 ವಿಮಾನ ನಿಲ್ದಾಣಗಳಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಆದೇಶ ಹೊರಡಿಸಿದೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ಸೇನೆ ಮೇ 7ರಂದು ದಾಳಿ ನಡೆಸಿದ ನಂತರ, ಗಡಿ ಪ್ರದೇಶಗಳ ಮೇಲೆ ಪಾಕ್ ಪಡೆಗಳು ಶೆಲ್, ಕ್ಷಿಪಣಿ ದಾಳಿ ಮುಂದುವರಿಸಿವೆ. ಇದರಿಂದಾಗಿ ತಲೆದೋರಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇಂದು (ಶನಿವಾರ) ಮುಂಜಾನೆ ಈ ಕ್ರಮ ಕೈಗೊಳ್ಳಲಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮತ್ತು ಸಂಬಂಧಿತ ವಾಯುಯಾನ ಅಧಿಕಾರಿಗಳು, ವಾಯುಪಡೆಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಉತ್ತರ ಮತ್ತು ಪಶ್ಚಿಮ ಭಾರತದಾದ್ಯಂತ 32 ವಿಮಾನ ನಿಲ್ದಾಣಗಳಲ್ಲಿ ಎಲ್ಲಾ ನಾಗರಿಕ ವಿಮಾನಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ಘೋಷಿಸಲಾಗಿದೆ.
ಕಾರ್ಯಾಚರಣೆ ಸ್ಥಗಿತ ಕ್ರಮವು 2025ರ ಮೇ 9ರಿಂದ 15ರವರೆಗೆ ಅನ್ವಯವಾಗಲಿದೆ ಎಂದು ಡಿಜಿಸಿಎ ಪ್ರಕಟಿಸಿದೆ.
ಅಧಮ್‌ಪುರ್, ಅಂಬಾಲಾ, ಅಮೃತಸರ, ಆವಂತಿಪುರ, ಬಟಿಂಡಾ, ಭುಜ್, ಬಿಕನೇರ್, ಚಂಡೀಗಢ, ಹಲ್ವಾರಾ, ಹಿಂಡನ್, ಜಮ್ಮು, ಜೈಸಲ್ಮೇರ್, ಜಾಮ್‌ನಗರ, ಜೋಧ್‌ಪುರ, ಕಾಂಡ್ಲಾ, ಕಂಗ್ರಾ, ಕೆಶೋದ್, ಕಿಶನ್‌ಗಢ, ಕುಲು ಮನಾಲಿ, ಲೇಹ್, ಲೂಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್, ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್ ಮತ್ತು ಉತ್ತರಲೈ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಇದಕ್ಕೂ ಮೊದಲು 24 ವಿಮಾನ ನಿಲ್ದಾಣಗಳಲ್ಲಿ ನಾಗರಿಕ ವಿಮಾನಗಳ ಕಾರ್ಯಾಚರಣೆಯನ್ನು ಮೇ 10ರವರೆಗೆ ಸ್ಥಗಿತಗೊಳಿಸಲು ಆದೇಶಿಸಲಾಗಿತ್ತು.
ಏತನ್ಮಧ್ಯೆ, 'ಕಾರ್ಯಾಚರಣೆಯ ಕಾರಣಾಂತರದಿಂದಾಗಿ' ದೆಹಲಿ ಮತ್ತು ಮುಂಬೈ ವಿಮಾನ ಮಾಹಿತಿ ಪ್ರದೇಶಗಳ (ಎಫ್‌ಐಆರ್) ವ್ಯಾಪ್ತಿಯೊಳಗಿನ 25 ವಿಭಾಗಗಳಲ್ಲಿ ವಾಯು ಸಂಚಾರ ಸೇವಾ (ಎಟಿಎಸ್) ಮಾರ್ಗಗಳ ತಾತ್ಕಾಲಿಕ ಮುಚ್ಚುವಿಕೆ ಆದೇಶವನ್ನೂ ಎಎಐ ವಿಸ್ತರಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22 ರಂದು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಬಳಿಕ ಕಾರ್ಯಾಚರಣೆಗೆ ಮುಂದಾಗಿದ್ದ ಭಾರತ, ಏಪ್ರಿಲ್ 30 ರಂದು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶ ಪ್ರವೇಶ ನಿರ್ಬಂಧಿಸಿತ್ತು.
ಪಾಕಿಸ್ತಾನವು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಏಪ್ರಿಲ್ 24 ರಂದು ಮುಚ್ಚಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.