ಭಾರತ, ಪಾಕಿಸ್ತಾನ
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಹಿಂಪಡೆಯುವುದು ಹಾಗೂ ಉಗ್ರರ ಹಸ್ತಾಂತರದ ಕುರಿತಾಗಿ ಮಾತ್ರವೇ ಮಾತುಕತೆ ನಡೆಸಲಾಗುವುದು ಎಂದು ಅಮೆರಿಕಕ್ಕೆ ಭಾರತ ಸ್ಪಷ್ಟಪಡಿಸಿದೆ. ಈ ಕುರಿತು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿರುದಾಗಿ ಮಾಧ್ಯಮಗಳಲ್ಲಿ ಭಾನುವಾರ ವರದಿಯಾಗಿದೆ.
ಶನಿವಾರ ಕದನ ವಿರಾಮ ಘೋಷಣೆಯಾದ ನಂತರ ಭಾರತ–ಪಾಕಿಸ್ತಾನ ಯುದ್ಧದ ಆತಂಕ ದೂರವಾಗಿದೆ. ಆದಾಗ್ಯೂ, ಕದನ ವಿರಾಮ ಉಲ್ಲಂಘಿಸಿ ಪಾಕ್ ಪಡೆಗಳು ಗಡಿಯಲ್ಲಿ ದಾಳಿ ನಡೆಸಿರುವುದರಿಂದ ಅನಿಶ್ಚಿತ ಪರಿಸ್ಥಿತಿ ಇದೆ.
'ಕಾಶ್ಮೀರದ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿದ್ದೇವೆ. ಪಿಒಕೆ ಹಿಂಪಡೆಯುವ ವಿಚಾರವಷ್ಟೇ ಬಾಕಿ ಇರುವುದು. ಅದನ್ನು ಬಿಟ್ಟರೆ ಮಾತನಾಡುವಂತಹದ್ದೇನೂ ಇಲ್ಲ. ಉಗ್ರರ ಹಸ್ತಾಂತರದ ಬಗ್ಗೆ ಅವರು ಪ್ರಸ್ತಾಪಿಸಿದರೆ, ನಾವೂ ಮಾತನಾಡಬಹುದು. ಆದರೆ, ಬೇರೆ ವಿಚಾರಗಳ ಬಗ್ಗೆ ಮಾತನಾಡುವ ಉದ್ದೇಶವಿಲ್ಲ' ಎಂದು ವಿದ್ಯಮಾನಗಳ ಬಗ್ಗೆ ಬಲ್ಲ ಮೂಲಗಳು ತಿಳಿಸಿವೆ.
ಹಾಗೆಯೇ, 'ನಾವು ಯಾರ ಮಧ್ಯಸ್ಥಿಕೆಯನ್ನೂ ಬಯಸುವುದಿಲ್ಲ. ಅದರ ಅಗತ್ಯವೂ ಇಲ್ಲ' ಎಂದು ಅಮೆರಿಕಕ್ಕೆ ಸ್ಪಷ್ಟವಾಗಿ ಹೇಳಿದೆ ಎನ್ನಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಹು ಸಮಯದಿಂದಲೂ ಇರುವ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಹೇಳಿದ್ದರು. ಅದನ್ನು, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸ್ವಾಗತಿಸಿದ್ದರು. ಇದೀಗ, ಈ ವಿಚಾರದಲ್ಲಿ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.