ದ್ರೌಪದಿ ಮುರ್ಮು
ನವದೆಹಲಿ: ‘ಆ್ಯಕ್ಸಿಯಂ–4’ ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಪ್ರಯಾಣ ಬೆಳೆಸಿರುವುದಕ್ಕೆ ಇಡೀ ದೇಶ ಉತ್ಸುಕವಾಗಿದ್ದು, ಹೆಮ್ಮೆಪಡುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಹೇಳಿದ್ದಾರೆ.
‘ನಾಸಾ ಮತ್ತು ಇಸ್ರೊ ನಡುವಿನ ಶಾಶ್ವತ ಪಾಲುದಾರಿಕೆಯನ್ನು ಪ್ರತಿಬಿಂಬಿಸುವ ಈ ಕಾರ್ಯಾಚರಣೆಯ ಯಶಸ್ಸಿಗೆ ನನ್ನ ಶುಭಾಶಯಗಳು. ಶುಭಾಂಶು ಶುಕ್ಲಾ ಅಲ್ಲದೆ, ಅಮೆರಿಕ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳು ಜಗತ್ತು ನಿಜಕ್ಕೂ ಒಂದೇ ಕುಟುಂಬ (ವಸುಧೈವ ಕುಟುಂಬಕಂ) ಎಂಬುದನ್ನು ಸಾಬೀತುಪಡಿಸಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಗಗನಯಾತ್ರಿಗಳು ನಡೆಸಲಿರುವ ವ್ಯಾಪಕ ಶ್ರೇಣಿಯ ಪ್ರಯೋಗಗಳು, ವೈಜ್ಞಾನಿಕ ಅಧ್ಯಯನಗಳು ಬಾಹ್ಯಾಕಾಶ ಸಂಶೋಧನೆಯಲ್ಲಿ ಹೊಸ ಅನ್ವೇಷಣೆಗಳಿಗೆ ಕಾರಣವಾಗಲಿವೆ’ ಎಂದು ಮುರ್ಮು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶುಭಾಂಶು ಶುಕ್ಲಾ ಸೇರಿದಂತೆ ಅಮೆರಿಕ, ಹಂಗರಿ ಮತ್ತು ಪೋಲೆಂಡ್‌ನ ಗಗನಯಾತ್ರಿಗಳಿರುವ ಗಗನನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ ‘ಫಾಲ್ಕನ್–9’ ರಾಕೆಟ್ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ 12.01ಕ್ಕೆ (ಭಾರತೀಯ ಕಾಲಮಾನ) ನಭಕ್ಕೆ ಚಿಮ್ಮಿದೆ.
ಕಮಾಂಡರ್ ಪೆಗ್ಗಿ ವಿಟ್ಸನ್ ನೇತೃತ್ವದಲ್ಲಿ, ಶುಕ್ಲಾ, ಹಂಗರಿಯ ಟಿಬೊರ್ ಕಾಪು, ಪೋಲೆಂಡ್‌ನ ಸ್ಲಾವೋಜ್ ವಿಸ್‌ನೀವ್‌ಸ್ಕಿ ಕೂಡ ಐಎಸ್‌ಎಸ್‌ಗೆ ತೆರಳಿದ್ದಾರೆ. ಜೂನ್ 26ರಂದು ಬೆಳಿಗ್ಗೆ 7ಕ್ಕೆ (ಭಾರತೀಯ ಕಾಲಮಾನ), ಶುಕ್ಲಾ ಅವರು ಇರುವ ಗಗನನೌಕೆಯನ್ನು ಐಎಸ್‌ಎಸ್‌ಗೆ ಜೋಡಿಸುವ ಗುರಿ ಹೊಂದಲಾಗಿದೆ.
‘ನಾಸಾ, ಆ್ಯಕ್ಸಿಯಂ ಸ್ಪೇಸ್ ಹಾಗೂ ಇಲಾನ್ ಮಸ್ಕ್ ಒಡೆತನ ಸ್ಪೇಸ್‌ಎಕ್ಸ್ ಜಂಟಿಯಾಗಿ ಈ ಬಾಹ್ಯಾಕಾಶ ಕಾರ್ಯಕ್ರಮ ರೂಪಿಸಿವೆ. ವಿವಿಧ ಕಾರಣಗಳಿಗಾಗಿ ಒಟ್ಟು ಆರು ಬಾರಿ ಈ ಬಾಹ್ಯಾಕಾಶ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.