ADVERTISEMENT

Monsoon | 3–4 ದಿನಗಳಲ್ಲಿ ದೇಶದಾದ್ಯಂತ ಮಳೆ, ಗರಿಗೆದರಲಿವೆ ಕೃಷಿ ಚಟುವಟಿಕೆ: IMD

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 14:32 IST
Last Updated 26 ಜೂನ್ 2025, 14:32 IST
   

ಮುಂಬೈ: ತಿಂಗಳ ಹಿಂದೆ ಕೇರಳ ಪ್ರವೇಶಿಸಿದ್ದ ನೈರುತ್ಯ ಮುಂಗಾರು ಇದೀಗ ಒಂದು ವಾರ ಮೊದಲೇ ಇಡೀ ದೇಶವನ್ನು ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಗುರುವಾರ ಹೇಳಿದೆ. ಇದರಿಂದಾಗಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ದೇಶದಾದ್ಯಂತ ವ್ಯಾಪಕವಾಗಿ ಮಳೆ ಸುರಿಯಲಿದೆ. ಇದರಿಂದ ಬಿತ್ತನೆ ಚಟುವಟಿಕೆಗಳು ಗರಿಗೆದರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂಲಗಳು ಹೇಳಿವೆ

ದೇಶದ ಅರ್ಧದಷ್ಟು ಕೃಷಿಭೂಮಿಗೆ ನೀರಾವರಿ ಸೌಕರ್ಯ ಲಭ್ಯವಿಲ್ಲ. ಹಾಗಾಗಿ, ಇಲ್ಲಿನ ಕೃಷಿ ಚಟುವಟಿಕೆಗಳು ಜೂನ್‌–ಸೆಪ್ಟೆಂಬರ್‌ನಲ್ಲಿ ಸುರಿಯುವ ಮಳೆಯನ್ನೇ ಆಶ್ರಯಿಸಿವೆ ಎಂದು ಇಲಾಖೆ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ನೈರುತ್ಯ ಕರಾವಳಿ ರಾಜ್ಯವಾದ ಕೇರಳದಲ್ಲಿ ಸಾಮಾನ್ಯವಾಗಿ ಜೂನ್‌ 1ರ ವೇಳೆಗೆ ಮಳೆ ಬೀಳುತ್ತದೆ. ನಂತರ, ಜುಲೈ 8ರ ಹೊತ್ತಿಗೆ ದೇಶದಾದ್ಯಂತ ಮಳೆಯಾಗುತ್ತದೆ. ಕಳೆದೆರಡು ವಾರದಿಂದ ಕಡಿಮೆಯಾಗಿದ್ದ ಮಳೆ ಮತ್ತೆ ವೇಗ ಪಡೆದುಕೊಂಡಿದೆ. ಕೇಂದ್ರ ಹಾಗೂ ಉತ್ತರ ರಾಜ್ಯಗಳನ್ನು ಆವರಿಸಿಕೊಳ್ಳುತ್ತಿದೆ ಎಂದು ಐಎಂಡಿ ಹೇಳಿದೆ.

ADVERTISEMENT

ರಾಜಸ್ಥಾನ, ಹರಿಯಾಣ, ದೆಹಲಿ ಹಾಗೂ ಉತ್ತರ ಪ್ರದೇಶ ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ ಎಂಬುದು ಐಎಂಡಿ ಗುರುವಾರ ಬಿಡುಗಡೆ ಮಾಡಿರುವ ಮಾಹಿತಿಯಿಂದ ತಿಳಿದುಬಂದಿದೆ.

ಮಧ್ಯ ಹಾಗೂ ಉತ್ತರ ಭಾರತದ ರಾಜ್ಯಗಳಲ್ಲಿ ಈ ವಾರ ಹಾಗೂ ಮುಂದಿನವಾರ ಸರಾಸರಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಬಿತ್ತನೆ ಕಾರ್ಯ ಆರಂಭಿಸಲು ರೈತರಿಗೆ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದೇಶದಲ್ಲಿ ಸತತ ಎರಡನೇ ವರ್ಷವೂ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಸಾದ್ಯತೆ ಇದೆ ಎಂದು ಐಎಂಡಿ ಕಳೆದ ತಿಂಗಳೇ ಮುನ್ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.