
ಇಂಡಿಗೊ ವಿಮಾನ
ಮುಂಬೈ: ಇಂಡಿಗೊ ವಿಮಾನ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯಕ್ಕೆ ಸಂಬಂಧಿಸಿ, ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಶುಕ್ರವಾರ ಕೆಲಸದಿಂದ ವಜಾಗೊಳಿಸಿದೆ.
ಡಿಜಿಸಿಎನ ಹಿರಿಯ ಅಧಿಕಾರಿಗಳಾಗಿರುವ ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳು ವಿಮಾನಯಾನದ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಾರೆ. ಸುರಕ್ಷತೆ, ಸಮರ್ಪಕ ಸೇವೆಯನ್ನು ಖಚಿತಪಡಿಸಿಕೊಳ್ಳುವ ಹೊಣೆ ಅವರದ್ದಾಗಿರುತ್ತದೆ.
‘ಇತ್ತೀಚೆಗೆ ನಡೆದ ಇಂಡಿಗೊ ವಿಮಾನ ಸಂಚಾರದಲ್ಲಿನ ಬಿಕ್ಕಟ್ಟಿನಲ್ಲಿ ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳ ಲೋಪವು ಇರುವುದರಿಂದ ನಾಲ್ವರನ್ನು ವಜಾಗೊಳಿಸಲಾಗಿದೆ. ಅವರು ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
ಸಿಇಒ ಮತ್ತೆ ವಿಚಾರಣೆಗೆ: ಇಂಡಿಗೊ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೀಟರ್ ಎಲ್ಬರ್ಸ್ ಅವರು ಶುಕ್ರವಾರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.
ಬಿಕ್ಕಟ್ಟಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಗುರುವಾರ ಹಾಜರಾಗುವಂತೆ ಡಿಜಿಸಿಎನ ತನಿಖಾ ತಂಡವು ಪೀಟರ್ ಅವರಿಗೆ ನಿರ್ದೇಶನ ನೀಡಿತ್ತು. ಗುರುವಾರ ಹಾಜರಾಗಿದ್ದ ಅವರನ್ನು ಶುಕ್ರವಾರ ಮತ್ತೆ ವಿಚಾರಣೆಗೆ ಕರೆಯಲಾಗಿತ್ತು.
ಆರ್ಥಿಕತೆಯಲ್ಲಿ ದಾಖಲೆ ಮಟ್ಟದ ದೋಷ
ಪ್ರಸ್ತುತ ಆಡಳಿತದಲ್ಲಿ ಆರ್ಥಿಕತೆಯು ದಾಖಲೆಯ ದೋಷಗಳನ್ನು ಹೊಂದಿದೆ ಮತ್ತು ಸರಿಯಲ್ಲದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಕಾಂಗ್ರೆಸ್ ಸಂಸದ ದೀಪೇಂದರ್ ಸಿಂಗ್ ಹೂಡಾ ಅವರು ಆರೋಪಿಸಿದ್ದಾರೆ. ಲೋಕಸಭೆಯಲ್ಲಿ ಶುಕ್ರವಾರ ಪೂರಕ ಅಂದಾಜುಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರೂಪಾಯಿ ಮೌಲ್ಯ ಕುಸಿತ ಹೆಚ್ಚುತ್ತಿರುವ ಅಸಮಾನತೆ ಸಾಲ ಹೆಚ್ಚಳ ಮತ್ತು ಪ್ರಮುಖ ವಲಯಗಳಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲದಾಗಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದರು.
‘ಪ್ರಮುಖ ವಲಯಗಳಲ್ಲಿ ಏಕಾಸ್ವಾಮ್ಯವನ್ನು ಸರ್ಕಾರ ಬೆಂಬಲಿಸುತ್ತಿದೆ. ಈ ಮಟ್ಟಿನ ಅಧಿಕಾರ ಕೇಂದ್ರೀಕರಣವನ್ನು ನಾನು ಕಂಡಿರಲಿಲ್ಲ. ಉದಾಹರಣೆಗೆ ವಿಮಾನಯಾನ ಮಾರುಕಟ್ಟೆಯು ಶೇ 65ರಷ್ಟು ಇಂಡಿಗೊವನ್ನು ಮತ್ತು ಶೇ 26ರಷ್ಟು ಏರ್‌ಇಂಡಿಯಾವನ್ನು ಅವಲಂಬಿಸಿದೆ. ಹಾಗಾಗಿ ಆ ಎರಡು ಸಂಸ್ಥೆಗಳು ನಿರ್ಧರಿಸಿದ ದರದಲ್ಲೇ ಪ್ರಯಾಣಿಸಬೇಕೇ ಹೊರತು ಬೇರೆ ಆಯ್ಕೆಗಳಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.