ಮಲ್ಲಿಕಾರ್ಜುನ ಖರ್ಗೆ
(ಚಿತ್ರ ಕೃಪೆ: X@kharge)
ಬಕ್ಸರ್ (ಬಿಹಾರ): ರಾಜ್ಯದಲ್ಲಿ ಆಡಳಿತಾರೂಢ ಜೆಡಿಯು ಹಾಗೂ ಬಿಜೆಪಿ ನಡುವಣ ಮೈತ್ರಿಯನ್ನು 'ಅವಕಾಶವಾದಿ' ಎಂದು ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಕ್ಕಾಗಿ ಮೈತ್ರಿ ಬದಲಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಬಿಹಾರದ ಬಕ್ಸರ್‌ನಲ್ಲಿ ನಡೆದ 'ಜೈ ಬಾಪು, ಜೈ ಭೀಮ್, ಜೈ ಸಂವಿಧಾನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಡುವಣ ಮೈತ್ರಿ ಕೇವಲ ಅಧಿಕಾರಕ್ಕಾಗಿ ಮಾತ್ರ ರೂಪುಗೊಂಡಿದೆ. ಬಿಹಾರದ ಅಭಿವೃದ್ಧಿ ಬಗ್ಗೆ ಚಿಂತಿತರಾಗಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ವಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು-ಎನ್‌ಡಿಎ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವಂತೆ ಜನರನ್ನು ಖರ್ಗೆ ಮನವಿ ಮಾಡಿದ್ದಾರೆ.
'ಜೆಡಿಯು-ಬಿಜೆಪಿ ನಡುವಣ ಮೈತ್ರಿ ಅವಕಾಶವಾದಿಯಾಗಿದ್ದು, ಇದು ರಾಜ್ಯದ ಜನರಿಗೆ ಒಳಿತನ್ನು ಮಾಡುವುದಿಲ್ಲ. ಕುರ್ಚಿಗಾಗಿ ಸಿಎಂ ನಿತೀಶ್ ಮೈತ್ರಿ ಬದಲಾಯಿಸುತ್ತಾರೆ. ಮಹಾತ್ಮ ಗಾಂಧೀಜಿ ಅವರನ್ನು ಕೊಲೆ ಮಾಡಿದ ಸಿದ್ಧಾತದೊಂದಿಗೆ ಜೆಡಿಯು ಕೈಜೋಡಿಸಿದೆ' ಎಂದು ಅವರು ಆರೋಪಿಸಿದ್ದಾರೆ.
'ಬಿಹಾರಕ್ಕೆ ₹1.25 ಲಕ್ಷ ಕೋಟಿ ಪ್ಯಾಕೇಜ್ ನೀಡುವುದಾಗಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಅದೀಗ ಏನಾಗಿದೆ? ಪ್ರಧಾನಿ ಸುಳ್ಳನ್ನು ಹೇಳುವ ಕಾರ್ಖಾನೆ ನಡೆಸುತ್ತಾರೆ' ಎಂದು ಅವರು ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.