ನವದೆಹಲಿ: ಕರ್ನಾಟಕ ಸರ್ಕಾರದ ಹಿರಿಯ ಸಚಿವರು ಹಾಗೂ ನ್ಯಾಯಾಧೀಶರು ಸೇರಿದಂತೆ ಹಲವು ಮಂದಿಯನ್ನು ಮಧುಬಲೆಗೆ (ಹನಿ ಟ್ರ್ಯಾಪ್) ಬೀಳಿಸಲು ಯತ್ನಿಸಿರುವ ಪ್ರಕರಣದ ತನಿಖೆಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಲಿದೆ.
ಜಾರ್ಖಂಡ್‌ನ ಬಿನಯ್ ಕುಮಾರ್ ಸಿಂಗ್ ಪರವಾಗಿ ವಕೀಲ ಬರುಣ್ ಕುಮಾರ್ ಸಿಂಗ್ ಅವರು ತುರ್ತು ಮನವಿ ಸಲ್ಲಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠವು ‘ಮಂಗಳವಾರ ಈ ವಿಷಯದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿತು.
‘ಕರ್ನಾಟಕ ವಿಧಾನಸಭೆಯಲ್ಲೇ ಈ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೊಬ್ಬರು, ನ್ಯಾಯಾಧೀಶರು ಸೇರಿದಂತೆ ಹಲವರನ್ನು ಮಧುಬಲೆಗೆ ಬೀಳಿಸುವ ಯತ್ನ ಮಾಡಿದ್ದಾರೆ ಎಂಬ ಆರೋಪ ಇದೆ. ಕರ್ನಾಟಕ ಸರ್ಕಾರದ ನಿಯಂತ್ರಣ ಅಥವಾ ಪ್ರಭಾವದಿಂದ ಮುಕ್ತವಾಗಿರುವ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ ಅಥವಾ ಸಿಬಿಐನಿಂದ ತನಿಖೆ ನಡೆಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.
ಸುಪ್ರೀಂ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಮೇಲ್ವಿಚಾರಣಾ ಸಮಿತಿ ಮೂಲಕ ತನಿಖೆಯ ಮೇಲ್ವಿಚಾರಣೆ ನಡೆಸಬೇಕು. ಈ ಪ್ರಕರಣದಿಂದ ನೇರವಾಗಿ ಅಥವಾ ಪರೋಕ್ಷವಾಗಿ ಪ್ರಯೋಜನ ಪಡೆದ ಎಲ್ಲ ಪ್ರಾಧಿಕಾರಗಳು/ವ್ಯಕ್ತಿಗಳ ಪಾತ್ರದ ಬಗ್ಗೆಯೂ ಮೇಲ್ವಿಚಾರಣಾ ಸಮಿತಿಯು ತನಿಖೆ ನಡೆಸಬೇಕು. ತಪ್ಪಿತಸ್ಥರೆಂದು ಕಂಡುಬಂದ ವ್ಯಕ್ತಿಯ ವಿರುದ್ಧ ಮೊಕದ್ದಮೆ ಹೂಡಲು ನಿರ್ದೇಶಿಸಬೇಕು’ ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
‘ಮಧುಬಲೆಯ ಬಲಿಪಶು ಎಂದು ಹೇಳಿಕೊಂಡಿರುವ ಹಾಲಿ ಸಚಿವರೊಬ್ಬರು ಈ ಆರೋಪ ಮಾಡಿದ್ದಾರೆ. ಇದಲ್ಲದೆ, ಮತ್ತೊಬ್ಬ ಸಚಿವರು ಈ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ. ಈ ಅಕ್ರಮದ ಪ್ರಮಾಣವು ಪ್ರಸ್ತುತ ಗೋಚರಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
‘ಮಧುಬಲೆಗೆ ಬಿದ್ದ ನ್ಯಾಯಾಧೀಶರು ರಾಜಿ ಮಾಡಿಕೊಳ್ಳುವುದರಿಂದ ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆ ಇದೆ ಮತ್ತು ಇದು, ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಹಾಳು ಮಾಡುತ್ತದೆ’ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.