ADVERTISEMENT

ಕೇರಳ: ನವೆಂಬರ್‌ 23ಕ್ಕೆ ಪ್ಯಾಲೆಸ್ಟೀನ್‌ ಪರ ಕಾಂಗ್ರೆಸ್‌ನ ಬೃಹತ್‌ ರ‍್ಯಾಲಿ

ಪಿಟಿಐ
Published 9 ನವೆಂಬರ್ 2023, 6:12 IST
Last Updated 9 ನವೆಂಬರ್ 2023, 6:12 IST
<div class="paragraphs"><p>ಕಾಂಗ್ರೆಸ್‌ (ಕಡತ ಚಿತ್ರ)</p></div>

ಕಾಂಗ್ರೆಸ್‌ (ಕಡತ ಚಿತ್ರ)

   

ತಿರುವನಂತಪುರ: ಯುದ್ಧಪೀಡಿತ ಪ್ಯಾಲೆಸ್ಟೀನ್‌ನ ಜನತೆಗೆ ಬೆಂಬಲ ನೀಡುವ ಸಲುವಾಗಿ ಕೆಪಿಸಿಸಿ (ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ) ಬೃಹತ್‌ ರ‍್ಯಾಲಿಯನ್ನು ಆಯೋಜಿಸುವುದಾಗಿ ಘೋಷಿಸಿದೆ.

ನವೆಂಬರ್‌ 23 ರಂದು ಕೋಯಿಕ್ಕೋಡ್ ಬೀಚ್‌ನಲ್ಲಿ ರ‍್ಯಾಲಿ ನಡೆಯಲಿದೆ. ಕೇರಳದಲ್ಲಿ ರಾಜಕೀಯ ಮತ್ತು ಚುನಾವಣಾ ಲಾಭ ಪಡೆಯಲು ಪ್ಯಾಲೆಸ್ಟೀನ್‌ ಜನರ ದುರವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಆಡಳಿತಾರೂಢ ಸಿಪಿಐ(ಎಂ)ನ ಬೂಟಾಟಿಕೆಯನ್ನು ಬಯಲಿಗೆಳೆಯಲು ಈ ರ‍್ಯಾಲಿಯು ವೇದಿಕೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್‌ ಹೇಳಿದ್ದಾರೆ.

ADVERTISEMENT

ರ‍್ಯಾಲಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್‌ ಚಾಲನೆ ನೀಡಲಿದ್ದು, ಭಾರಿ ಜನಸ್ತೋಮ ಒಟ್ಟುಗೂಡುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಇಸ್ರೇಲ್‌ಗೆ ಬೆಂಬಲ ನೀಡುತ್ತಿದ್ದು, ಪ್ಯಾಲೆಸ್ಟೀನ್‌ ಜನರ ವಿರುದ್ಧವಾಗಿದೆ ಎಂದು ಸಿಪಿಐ(ಎಂ)ನ ಕಟು ಟೀಕೆಗಳ ಹಿನ್ನೆಲೆಯಲ್ಲಿ ಈ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ.

ಪ್ಯಾಲೆಸ್ಟೀನ್ ಪರ ರ‍್ಯಾಲಿ ಆಯೋಜಿಸಿದ್ದಕ್ಕಾಗಿ ಕಾಂಗ್ರೆಸ್ ನಾಯಕ ಆರ್ಯಡನ್ ಶೌಕತ್ ಅವರಿಂದ ವಿವರಣೆ ಕೇಳಿದ ಕೆಪಿಸಿಸಿ ನಡೆಯನ್ನು ಎಡಪಕ್ಷವು ಪ್ರಶ್ನಿಸಿದೆ.

ಇಸ್ರೇಲ್‌ ಪಡೆಗಳು ಅಮಾಯಕ ಪ್ಯಾಲೆಸ್ಟೀನಿಯನ್ನರನ್ನು ಕಗ್ಗೊಲೆ ಮಾಡುತ್ತಿವೆ ಎಂದು ಆರೋಪಿಸಿರುವ ಸುಧಾಕರನ್‌, ತಾಯ್ನಾಡಿನಲ್ಲಿ ವಾಸಿಸುವ ಪ್ಯಾಲೆಸ್ಟೀನ್‌ ಜನರ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಕ್ರಮವನ್ನು ಕಾಂಗ್ರೆಸ್‌ ಬೆಂಬಲಿಸುವುದಿಲ್ಲ. ಜವಾಹರಲಾಲ್‌ ನೆಹರೂ ಅವರಿಂದ ಮನಮೋಹನ್‌ ಸಿಂಗ್‌ವರೆಗಿನ ಕಾಂಗ್ರೆಸ್‌ ಸರ್ಕಾರವು ಯಾವಾಗಲೂ ಪ್ಯಾಲೆಸ್ಟೀನ್‌ ಜನರ ಹೋರಾಟವನ್ನು ಬೆಂಬಲಿಸಿವೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.