
ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತು ಹೋಟೆಲ್ ಧ್ವಂಸಗೊಳಿಸುತ್ತಿರುವ ಶಿವಸೇನಾ ಕಾರ್ಯಕರ್ತರು
–ಪಿಟಿಐ ಚಿತ್ರಗಳು
ಮುಂಬೈ: ಸ್ಟ್ಯಾಂಡ್ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ‘ದೇಶದ್ರೋಹಿ’ ಎಂದು ಕರೆದಿರುವುದು ವಿವಾದಕ್ಕೆ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ಕುನಾಲ್ ಕಾಮ್ರಾ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದ್ದ ಮುಂಬೈನ ಖಾರ್ ಪ್ರದೇಶದ ಹ್ಯಾಬಿಟಾಟ್ ಸ್ಟುಡಿಯೊ ಮತ್ತು ಯುನಿಕಾಂಟಿನೆಂಟಲ್ ಹೋಟೆಲ್ ಅನ್ನು ಶಿಂದೆ ನೇತೃತ್ವದ ಶಿವಸೇನಾ ಕಾರ್ಯಕರ್ತರು ಭಾನುವಾರ ರಾತ್ರಿ ಹಾನಿಗೊಳಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ‘ಸ್ಟುಡಿಯೊ ಮತ್ತು ಹೋಟೆಲ್ ಅನ್ನು ಹಾನಿಗೊಳಿಸಿ ಲೂಟಿ ಮಾಡಿದ ಆರೋಪ ಸಂಬಂಧ 40 ಮಂದಿ ಶಿವಸೇನಾ ಕಾರ್ಯಕರ್ತರು ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂದೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕುನಾಲ್ ಕಾಮ್ರಾ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಏಕನಾಥ ಶಿಂದೆ ವಿರುದ್ಧ ಕುನಾಲ್ ಕಾಮ್ರಾ ಅವಹೇಳನಕಾರಿ ಹೇಳಿಕೆ ನೀಡಿರುವ ಮತ್ತು ಸ್ಟುಡಿಯೊ ಮತ್ತು ಹೋಟೆಲ್ ಅನ್ನು ಶಿವಸೇನಾ ಕಾರ್ಯಕರ್ತರು ಧ್ವಂಸಗೊಳಿಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳು ಹರಿದಾಡುತ್ತಿವೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ನೀಡಿರುವ ದೂರು ಆಧರಿಸಿ ಕಾಮ್ರಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(1) (ಬಿ) (ಸಾರ್ವಜನಿಕ ದುಷ್ಕೃತ್ಯಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 356(2) (ಮಾನನಷ್ಟ) ಸೇರಿದಂತೆ ವಿವಿಧ ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತ ಸ್ಟುಡಿಯೊ ಮತ್ತು ಹೋಟೆಲ್ ಅನ್ನು ಹಾನಿಗೊಳಿಸಿದ ಆರೋಪ ಮೇಲೆ ರಾಹುಲ್ ಕನಾಲ್ (ಯುವ ಸೇನಾ), ವಿಭಾಗ್ ಪ್ರಮುಖ್ ಕುನಾಲ್ ಸರ್ಮಾರ್ಕರ್ ಮತ್ತು ಅಕ್ಷಯ್ ಪನ್ವೇಲ್ಕರ್ ಸೇರಿದಂತೆ 15 ರಿಂದ 20 ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಮಾರ್ಕರ್, ಪನ್ವೇಲ್ಕರ್ ಸೇರಿದಂತೆ ಇತರರು ಹೋಟೆಲ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ‘ಶಿವಸೇನಾ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿದಾಗ ಅವರನ್ನು ತಳ್ಳಿದ್ದು, ಹೋಟೆಲ್ ಸಿಬ್ಬಂದಿಯ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ವಿಜಯ್ ಸಯೀದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.