
ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಅವರನ್ನು ನೋಡಲು ಸಾಧ್ಯವಾಗದ್ದರಿಂದ ರೊಚ್ಚಿಗೆದ್ದ ಅಭಿಮಾನಿಗಳು ಕೋಲ್ಕತ್ತದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ದಾಂದಲೆ ನಡೆಸಿದ್ದರು.
ಕೋಲ್ಕತ್ತ: ಫುಟ್‌ಬಾಲ್ ದಿಗ್ಗಜ ಲಯೊನೆಲ್ ಮೆಸ್ಸಿ ಭಾಗವಹಿಸಿದ್ದ ಕಾರ್ಯಕ್ರಮವು ಗೊಂದಲದ ಗೂಡಾಗಿ, ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ಸಾಲ್ಟ್ ಲೇಕ್ ಕ್ರೀಡಾಂಗಣಕ್ಕೆ ಭೇಟಿ ನೀಡಲು ಮುಂದಾಗಿದ್ದ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕ್ರೀಡಾಂಗಣಕ್ಕೆ ಪ್ರವೇಶ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರವು ರಾಜ್ಯಪಾಲರ ಸಾಂವಿಧಾನಿಕ ಸ್ಥಾನಕ್ಕೆ ಅವಮಾನ ಮಾಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಜತೆಗೆ, ಈ ಕುರಿತು ಸೂಕ್ತ ಕಾರಣ ತಿಳಿಸಬೇಕು’ ಎಂದು ತಾಕೀತು ಮಾಡಿದ್ದಾರೆ.
‘ನಾನು ಘಟನಾ ಸ್ಥಳಕ್ಕೆ ಭೇಟಿ ನೀಡದೆ, ಪರಿಶೀಲನೆ ನಡೆಸದ ಹೊರತು ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ. ಕ್ರೀಡಾಂಗಣದಲ್ಲಿ ಏನಾಯಿತು ಎಂಬುದನ್ನು ಕಣ್ಣಾರೆ ನೋಡಲು ಬಯಸುತ್ತೇನೆ’ ಎಂದು ಅವರು ತಿಳಿಸಿದ್ದಾರೆ.
‘ರಾಜ್ಯಪಾಲರನ್ನು ಈ ರೀತಿ ನಡೆಸಿಕೊಳ್ಳಲು ಹೇಗೆ ಸಾಧ್ಯ?, ರಾಜ್ಯಪಾಲರು ರಬ್ಬರ್ ಸ್ಟಾಂಪ್ ಅಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈ ಘಟನೆಯು ‘ಸಾಂವಿಧಾನಿಕ ಅಧಿಕಾರದ ಭೀಕರವಾದ ಅಪ್ರಸ್ತುತತೆ’ಗೆ ಸಾಕ್ಷಿಯಾಗಿದೆ’ ಎಂದು ಮಮತಾ ಸರ್ಕಾರ ವಿರುದ್ಧ ಬೋಸ್ ಗುಡುಗಿದ್ದಾರೆ.
‘ಇದು ನನಗಾದ ವೈಯಕ್ತಿಕ ಅವಮಾನವಲ್ಲ, ಬದಲಾಗಿ ರಾಜ್ಯಪಾಲರ ಸಾಂವಿಧಾನಿಕ ಸ್ಥಾನಕ್ಕೆ ಮಾಡಿದ ಅವಮಾನ. ವಾಸ್ತವತೆಯನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ನಾನು ಖಂಡಿತವಾಗಿಯೂ ಕ್ರೀಡಾಂಗಣಕ್ಕೆ ಭೇಟಿ ನೀಡುತ್ತೇನೆ. ಪರಿಸ್ಥಿತಿಯನ್ನು ಅವಲೋಕಿಸುತ್ತೇನೆ’ ಎಂದಿದ್ದಾರೆ.
ತಮ್ಮ ನೆಚ್ಚಿನ ಆಟಗಾರ ಲಯೊನೆಲ್ ಮೆಸ್ಸಿಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಾವಿರಾರು ಫುಟ್‌ಬಾಲ್ ಅಭಿಮಾನಿಗಳು ಕಾತರಿಸಿದ್ದರು. ಸರ್ವಪ್ರಯತ್ನಗಳನ್ನೂ ಮಾಡಿ ಟಿಕೆಟ್, ಪಾಸ್ ಹೊಂದಿಸಿಕೊಂಡು ಶನಿವಾರ ಸಾಲ್ಟ್ ಲೇಕ್ ಕ್ರೀಡಾಂಗಣದಕ್ಕೆ ಲಗ್ಗೆ ಇಟ್ಟಿದ್ದರು. ಆದರೆ, ಮೆಸ್ಸಿ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗಲಿಲ್ಲ. ಅದರಿಂದ ಸಿಟ್ಟಿಗೆದ್ದ ಅಭಿಮಾನಿಗಳು ನೂಕಾಟ ನಡೆಸಿದ್ದರು.
ನೂರಾರು ಜನರು ಪ್ರೇಕ್ಷಕರ ಗ್ಯಾಲರಿಯಲ್ಲಿನ ಕುರ್ಚಿಗಳನ್ನು ಧ್ವಂಸಗೊಳಿಸಿ, ಮೈದಾನದತ್ತ ಎಸೆದಿದ್ದರು. ನೀರಿನ ಬಾಟಲಿಗಳನ್ನು ಟ್ರ್ಯಾಕ್ ಮೇಲೆ ಬಿಸಾಡಿದ್ದರು. ಕ್ರೀಡಾಂಗಣದೊಳಗೆ ನುಗ್ಗಿದ ಅಭಿಮಾನಿಗಳು ಅಲ್ಲಿ ಅಳವಡಿಸಿದ್ದ ಬ್ಯಾನರ್‌ಗಳನ್ನು ಕಿತ್ತುಹಾಕಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.