ADVERTISEMENT

ಮಹಾರಾಷ್ಟ್ರ | ಮತದಾರರ ಪರಿಷ್ಕರಣೆಯಲ್ಲಿ ಅಕ್ರಮದ ಘಾಟು: ECಗೆ ಕಾಂಗ್ರೆಸ್‌ ಪತ್ರ

ಆಡಳಿತರೂಢ ಪಕ್ಷಗಳಿಗೆ ಹೆಚ್ಚಿನ ಅನುಕೂಲ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2024, 13:15 IST
Last Updated 29 ನವೆಂಬರ್ 2024, 13:15 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

– ‍ಪ್ರಜಾವಾಣಿ ಚಿತ್ರ

ನವದೆಹಲಿ: ‘ಮಹಾರಾಷ್ಟ್ರ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಪರಿಷ್ಕರಣೆ ಆಗಿರುವುದು ಅನುಮಾನ ಮೂಡಿಸಿದೆ. ಹಲವು ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದಿದ್ದರೆ, ಭಾರಿ ಸಂಖ್ಯೆಯಲ್ಲಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಆರೋಪ ಮಾಡಿದೆ.

ADVERTISEMENT

ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಕಾಂಗ್ರೆಸ್‌, ಮತದಾರರ ಪಟ್ಟಿಯಲ್ಲಿ ಸರಾಸರಿ 50,000ದಷ್ಟು ಮತದಾರರ ಸಂಖ್ಯೆ ಸೇರ್ಪಡೆಯಾಗಿದ್ದ 50 ಕ್ಷೇತ್ರಗಳ ಪೈಕಿ 47ರಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಜಯಗಳಿಸಿವೆ ಎಂದು ಹೇಳಿದೆ.

ಕೊನೆ ಗಂಟೆಯಲ್ಲಿ 76 ಲಕ್ಷ ಮತದಾನ: ಮತದಾನದ ದಿನವಾದ ನವೆಂಬರ್‌ 20ರಂದು ಸಂಜೆ 5ಕ್ಕೆ ಮತ್ತು ರಾತ್ರಿ 11.30ಕ್ಕೆ ಆಯೋಗ ಪ್ರಕಟಿಸಿದ ಶೇಕಡವಾರು ಮತದಾನದ ಅಂಕಿ ಅಂಶಗಳಲ್ಲಿ ಭಾರಿ ಪ್ರಮಾಣದ ಏರಿಕೆ ದಾಖಲಾಗಿರುವುದನ್ನು ಗುರುತಿಸಬಹುದಾಗಿದೆ. ಅದರ ಪ್ರಕಾರ ಮತದಾನದ ಕೊನೆಯ ಗಂಟೆಯಲ್ಲಿ 76 ಲಕ್ಷದಷ್ಟು ಜನರು ಮತ ಚಲಾಯಿಸಿದ್ದಾರೆ. ಈ ಬಗ್ಗೆ ಆಯೋಗ ಸ್ಪಷ್ಟ ಚಿತ್ರಣ ನೀಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಇದು ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಆಗಿದೆಯೇ ಎಂಬುದರ ಬಗ್ಗೆ ಅನುಮಾನ ಮೂಡಿಸುತ್ತದೆ. ಈ ಬಗ್ಗೆ ಆಯೋಗ ಸ್ಪಷ್ಟನೆ ನೀಡಿ, ತನ್ನ ಜವಾಬ್ದಾರಿ ಮೆರೆಯಬೇಕು ಎಂದು ಅದು ಒತ್ತಾಯಿಸಿದೆ. ಈ ಕುರಿತು ಕಾಂಗ್ರೆಸ್‌ನ ಹಿರಿಯ ನಾಯಕರಾದ ನಾನಾ ಪಟೋಲೆ, ರಮೇಶ್‌ ಚೆನ್ನಿತ್ತಲ ಮತ್ತು ಮುಕುಲ್‌ ವಾಸ್ನಿಕ್‌ ಅವರು ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಪ್ರತಿ ಕ್ಷೇತ್ರದಲ್ಲೂ 10,000ದಷ್ಟು ಪರಿಷ್ಕರಣೆ: ಪ್ರತಿ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಲ್ಲಿನ ಮತದಾರರ ಸಂಖ್ಯೆಯಲ್ಲಿ ಸುಮಾರು 10,000ದಷ್ಟು ಪರಿಷ್ಕರಣೆಗಳಾಗಿವೆ. ಹಲವು ಮತದಾರರನ್ನು ಕೈಬಿಟ್ಟು ಮತ್ತು ಹಲವರನ್ನು ಸೇರಿಸಿರುವ ನಿದರ್ಶನಗಳಿವೆ ಎಂದು ಕಾಂಗ್ರೆಸ್‌ ದೂರಿದೆ.

ಇದರ ಪರಿಣಾಮ ಈ ವರ್ಷದ ಜುಲೈ ಮತ್ತು ನವೆಂಬರ್‌ ನಡುವೆ ಸುಮಾರು 47 ಲಕ್ಷದಷ್ಟು ಮತದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿತ್ತು. ಈ ಬಗ್ಗೆ ಅಕ್ಟೋಬರ್‌ 19ರಂದು ಆಯೋಗಕ್ಕೆ ದೂರು ನೀಡಲಾಗಿತ್ತು. ಆದರೆ ಆಯೋಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಕಾಂಗ್ರೆಸ್‌ ತಿಳಿಸಿದೆ.

ಲೋಕಸಭಾ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ನಡುವಿನ ಐದು ತಿಂಗಳ ಅಂತರದಲ್ಲಿ ಭಾರಿ ಸಂಖ್ಯೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದು ಹೇಗೆ ಸಾಧ್ಯವಾಯಿತು. ಈ ರೀತಿಯ ಚುನಾವಣಾ ವಂಚನೆಯನ್ನು ತಡೆಯಲು ಆಯೋಗಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಅದು ಪ್ರಶ್ನಿಸಿದೆ.

ಮತದಾನದ ಪ್ರಮಾಣದಲ್ಲಿ ಏರಿಕೆ: ಮತದಾನದ ದಿನವಾದ ನವೆಂಬರ್‌ 20ರಂದು ಸಂಜೆ 5 ಗಂಟೆಗೆ ಶೇ 58.22ರಷ್ಟು ಮತದಾನ ನಡೆದಿತ್ತು ಎಂದು ಆಯೋಗ ಪ್ರಕಟಿಸಿತ್ತು. ಅದು ರಾತ್ರಿ 11.30ಕ್ಕೆ ಪ್ರಕಟಿಸಿದ ಮಾಹಿತಿ ಪ್ರಕಾರ ಮತದಾನದ ಪ್ರಮಾಣ ಶೇ 65.02ಕ್ಕೆ ಏರಿಕೆಯಾಗಿತ್ತು. ಅಲ್ಲದೆ ನವೆಂಬರ್‌ 23ರ ಮತ ಎಣಿಕೆ ದಿನದಂದು ಆಯೋಗವು ಮತದಾನದ ಪ್ರಮಾಣವನ್ನು ಶೇ 66.05ಕ್ಕೆ ಪರಿಷ್ಕರಿಸಿತ್ತು ಎಂದು ಕಾಂಗ್ರೆಸ್‌ ಅಂಕಿ ಅಂಶವನ್ನು ಉಲ್ಲೇಖಿಸಿದೆ.

ಆಯೋಗದ ದತ್ತಾಂಶದ ಪ್ರಕಾರ ಸಂಜೆ 5ರಿಂದ 6 ಗಂಟೆ ಅವಧಿಯಲ್ಲಿ ಸುಮಾರು 76 ಲಕ್ಷ ಮತಗಳು ಚಲಾವಣೆಯಾಗಿವೆ. ಅಲ್ಲದೆ ಮತಗಳ ಎಣಿಕೆಗೂ ಕೆಲವೇ ಗಂಟೆಗಳ ಮೊದಲು ಇನ್ನೂ ಸುಮಾರು 10 ಲಕ್ಷದಷ್ಟು ಮತಗಳು ಹೆಚ್ಚಳವಾಗಿವೆ. ಚುನಾವಣಾ ಇತಿಹಾಸದಲ್ಲಿಯೇ ಈ ರೀತಿಯದ್ದನ್ನು ಕೇಳಿರಲಿಲ್ಲ ಎಂದು ಕಾಂಗ್ರೆಸ್‌ ಅಸಮಾಧಾನ ವ್ಯಕ್ತಪಡಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.