ಕೃಷಿ ಸಚಿವ ಮಾಣಿಕ್‌ರಾವ್ ಕೊಕಾಟೆ ಅವರು ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿರುವ ದೃಶ್ಯ
Credit: X/@RRPSpeaks
ಮುಂಬೈ: ವಿಧಾನಸಭೆ ಅಧಿವೇಶನ ನಡೆಯುವಾಗ ಮೊಬೈಲ್‌ನಲ್ಲಿ ‘ರಮ್ಮಿ’ ಆಡುತ್ತಿದ್ದರು ಎಂಬ ಆರೋಪ ಎದುರಿಸುತ್ತಿರುವ ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರು ರಾಜ್ಯ ಸರ್ಕಾರವನ್ನೇ ‘ಭಿಕ್ಷುಕ’ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ರೈತರು ಮತ್ತು ಮಹಾರಾಷ್ಟ್ರ ಸರ್ಕಾರವನ್ನು ‘ಭಿಕ್ಷುಕ’ ಎಂದು ಕರೆದಿರುವ ಸಚಿವ ಮಾಣಿಕರಾವ್ ಕೊಕಾಟೆ ನಡೆಯ ಬಗ್ಗೆ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದು, ಕೊಕಾಟೆ ಅವರ ಸಚಿವ ಸ್ಥಾನದ ಭವಿಷ್ಯ ಶೀಘ್ರವೇ ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಕೃಷಿ ಬಿಕ್ಕಟ್ಟು ಮತ್ತು ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮಾಣಿಕರಾವ್ ಕೊಕಾಟೆ ಅವರ ಹೇಳಿಕೆಗಳನ್ನು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿಗಳಾದ ಏಕನಾಥ ಶಿಂದೆ ಮತ್ತು ಅಜಿತ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.
ಕೊಕಾಟೆ ಹೇಳಿಕೆಗಳು ಕುರಿತು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿರುವ ದೇವೇಂದ್ರ ಫಡಣವೀಸ್, ‘ಸಚಿವರು ಹೀಗೆಲ್ಲ ಹೇಳುವುದು ಸೂಕ್ತವಲ್ಲ, ರಾಜ್ಯದ ಆರ್ಥಿಕ ವ್ಯವಸ್ಥೆಯು ಹಲವು ಸವಾಲುಗಳ ನಡುವೆಯೂ ಸುಸ್ಥಿತಿಯಲ್ಲಿದೆ’ ಎಂದು ಹೇಳಿದ್ದಾರೆ.
ಮಾಣಿಕರಾವ್ ಕೊಕಾಟೆ ಅವರನ್ನು ಕೂಡಲೇ ಸಂಪುಟದಿಂದ ಕೈಬಿಡುವಂತೆ ವಿಪಕ್ಷಗಳ ‘ಮಹಾ ವಿಕಾಸ್ ಅಘಾಡಿ’ ಮೈತ್ರಿಕೂಟ ಆಗ್ರಹಿಸಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಕಾಟೆ ಅವರನ್ನು ಸಂಪುಟದಿಂದ ತೆಗೆದುಹಾಕುವ ಅಥವಾ ಖಾತೆಯನ್ನು ಬದಲಾಯಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಕೊಕಾಟೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಅಜಿತ್ ಪವಾರ್, ನಾನು ಇನ್ನೂ ಅವರನ್ನು (ಕೊಕಾಟೆ) ಭೇಟಿ ಮಾಡಿಲ್ಲ. ಮುಂದಿನ ಸೋಮವಾರ ಅಥವಾ ಮಂಗಳವಾರ ನಾನು ಅವರನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಅವರಿಂದ ವಿವರಣೆ ಪಡೆಯುತ್ತೇನೆ’ ಎಂದು ಹೇಳಿದ್ದಾರೆ.
ಕೊಕಾಟೆ ಅವರು ಅಧಿವೇಶನ ನಡೆಯುವಾಗ ಮೊಬೈಲ್‌ನಲ್ಲಿ ‘ರಮ್ಮಿ’ ಆಡುತ್ತಿದ್ದ ಬಗ್ಗೆ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ವಿಧಾನ ಪರಿಷತ್ ಸಭಾಪತಿ ರಾಮ್ ಶಿಂಧೆ ತನಿಖೆಗೆ ಆದೇಶಿಸಿದ್ದಾರೆ ಎಂದು ಪವಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.