
ಅಸಾದುದ್ದೀನ್ ಒವೈಸಿ
ಕೃಪೆ: ಪಿಟಿಐ
ಮುಂಬೈ: ಹಿಜಾಬ್ ಧರಿಸಿದ ಮಹಿಳೆಯು ಮುಂದೊಂದು ದಿನ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ. ಈ ಹೇಳಿಕೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಮಹಾರಾಷ್ಟ್ರದಲ್ಲಿ ಜನವರಿ 15ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಸೋಲಾಪುರದಲ್ಲಿ ಮಾತನಾಡಿದ ಓವೈಸಿ, 'ಒಂದು ಧರ್ಮಕ್ಕೆ ಸೇರಿದವರಷ್ಟೇ ಪ್ರಧಾನಿಯಾಗಬೇಕು. ಪ್ರಧಾನಿಯಾಗಬೇಕು ಎಂಬುದಾಗಿ ಪಾಕಿಸ್ತಾನದ ಸಂವಿಧಾನ ಹೇಳುತ್ತದೆ. ಆದರೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವು, ದೇಶದ ಯಾವುದೇ ಪ್ರಜೆ ಬೇಕಾದರೂ ಪ್ರಧಾನಿಯಾಗಬಹುದು. ರಾಜ್ಯದ ಮುಖ್ಯಮಂತ್ರಿಯಾಬಹುದು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಭಗವಂತನ ದಯೆಯಿಂದ, ಹಿಜಾಬ್ ಧರಿಸುವ ಹೆಣ್ಣು ಮಗಳೊಬ್ಬಳು ಈ ದೇಶದ ಪ್ರಧಾನಿಯಾಗಲಿದ್ದಾರೆ. ಅಂದು ನಾನಾಗಲೀ, ಈ ತಲೆಮಾರಿನವರಾಗಲೀ ಇಲ್ಲದೇ ಇರಬಹುದು' ಎಂದು ಹೇಳಿದ್ದಾರೆ.
'ಖಂಡಿತವಾಗಿಯೂ ಆ ದಿನ ಬಂದೇ ಬರುತ್ತದೆ ಎಂಬ ವಿಶ್ವಾಸವಿದೆ. ಮುಸ್ಲಿಮರ ವಿರುದ್ಧ ನೀವು ಹರಡುತ್ತಿರುವ ದ್ವೇಷ ಹೆಚ್ಚು ಕಾಲ ಉಳಿಯುವುದಿಲ್ಲ' ಎಂದು ಅವರು ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ, ಏಕನಾಥ ಶಿಂದೆ ಅವರ 'ಶಿವಸೇನಾ' ಮತ್ತು ಅಜಿತ್ ಪವಾರ್ ಅವರ 'ಎನ್‌ಸಿಪಿ'ಯನ್ನೊಳಗೊಂಡ ಮಹಾಯುತಿ ಮೈತ್ರಿ ಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸದಂತೆ ಒವೈಸಿ ಮನವಿ ಮಾಡಿದ್ದಾರೆ.
ಬಿಜೆಪಿ ಕಿಡಿ
ಬಿಜೆಪಿ ಸಂಸದ ಅನಿಲ್ ಬೊಂಡೆ ಅವರು, ಒವೈಸಿ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಅವರು ಮುಸ್ಲಿಂ ಮಹಿಳೆಯರ ಕುರಿತು ಅರ್ಧ ಸತ್ಯಗಳನ್ನಷ್ಟೇ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
'ಯಾರ ಅಧೀನಕ್ಕೂ ಒಳಪಡಲು ಬಯಸದ ಮಹಿಳೆಯರು ಹಿಜಾಬ್ ಧರಿಸುವುದನ್ನು ವಿರೋಧಿಸುತ್ತಿದ್ದಾರೆ. ಇರಾನ್‌ನಲ್ಲಿ ಈ ಅಭ್ಯಾಸವನ್ನು ವಿರೋಧಿಸಿ ಭಾರಿ ಪ್ರತಿಭಟನೆ ನಡೆಯುತ್ತಿದೆ' ಎಂದು ಒತ್ತಿಹೇಳಿದ್ದಾರೆ.
'ದೇಶದಲ್ಲಿ ಹಿಂದೂಗಳು ಒಗ್ಗಟ್ಟಾಗಿರಬೇಕು' ಎಂದು ಕರೆ ನೀಡಿದ್ದಾರೆ.
'ಒವೈಸಿ ಅವರು ಚುನಾವಣಾ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಮತಗಳನ್ನು ವಿಭಜಿಸುವುದು ಅವರ ಉದ್ದೇಶವಾಗಿರುತ್ತದೆ. ಇದರಿಂದ ಕೆಲವು ಪಕ್ಷಗಳಿಗೆ ಲಾಭವಾಗಲಿದೆ. ಹೀಗಾಗಿ, ಅಂತಹ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬಾರದು' ಎಂದು ಎನ್‌ಸಿಪಿಯ ಪ್ರಫುಲ್ ಪಟೇಲ್ ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.