ADVERTISEMENT

ಗುವಾಹಟಿಯಿಂದ ಗೋವಾಗೆ ಮಹಾರಾಷ್ಟ್ರ ಬಂಡಾಯ ಶಾಸಕರ ದಂಡು

ಪಿಟಿಐ
Published 29 ಜೂನ್ 2022, 6:15 IST
Last Updated 29 ಜೂನ್ 2022, 6:15 IST
ಗುವಾಹಟಿಯ ಕಾಮಾಕ್ಯ ದೇವಾಲಯದಲ್ಲಿ ಶಿವಸೇನಾ ಬಂಡಾಯ ಮುಖಂಡ ಏಕನಾಥ ಶಿಂಧೆ
ಗುವಾಹಟಿಯ ಕಾಮಾಕ್ಯ ದೇವಾಲಯದಲ್ಲಿ ಶಿವಸೇನಾ ಬಂಡಾಯ ಮುಖಂಡ ಏಕನಾಥ ಶಿಂಧೆ   

ಗುವಾಹಟಿ: ಒಂದು ವಾರದಿಂದ ಅಸ್ಸಾಂನ ಗುವಾಹಟಿಯಲ್ಲಿ ಬೀಡು ಬಿಟ್ಟಿರುವ ಶಿವಸೇನಾ ಬಂಡಾಯ ಶಾಸಕರು ಇಂದು ಗೋವಾಗೆ ತೆರಳುತ್ತಿರುವುದಾಗಿ ವರದಿಯಾಗಿದೆ.

ಸ್ಪೈಸ್‌ಜೆಟ್‌ ವಿಮಾನವನ್ನು ಕಾಯ್ದಿರಿಸಲಾಗಿದ್ದು, ಮಧ್ಯಾಹ್ನ 3ರ ಹೊತ್ತಿಗೆ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ ಬೊರ್ಡೊಲೊಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ಗೋವಾಗೆ ತೆರಳಲಿದೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

ಶಿವಸೇನಾದ 39 ಮಂದಿ ಬಂಡಾಯ ಶಾಸಕರು ಹಾಗೂ ಕೆಲವು ಪಕ್ಷೇತರ ಅಭ್ಯರ್ಥಿಗಳು ಒಂದೇ ವಿಮಾನದಲ್ಲಿ ಗೋವಾ ತಲುಪಲಿದ್ದು, ಅಲ್ಲಿಂದ ಮುಂಬೈಗೆ ಹೋಗುವ ಸಾಧ್ಯತೆ ಇದೆ.

ADVERTISEMENT

ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಸೂಚಿಸುವಂತೆ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡಣವೀಸ್ ಅವರು ರಾಜ್ಯಪಾಲ ಭಗತ್‌ಸಿಂಗ್‌ ಕೋಶಿಯಾರಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದ್ದರು. ಅದರ ಬೆನ್ನಲ್ಲೇ, ಬಹುಮತ ಸಾಬೀತುಪಡಿಸುವ ಏಕೈಕ ಕಾರ್ಯಸೂಚಿಯೊಂದಿಗೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು ವಿಧಾನಸಭೆಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಅದರಂತೆ, ಮಹಾ ವಿಕಾಸ್ ಅಘಾಡಿ(ಎಂವಿಎ) ಸರ್ಕಾರವು ನಾಳೆ ಬಹುಮತ ಸಾಬೀತು ಪಡಿಸಬೇಕಿದೆ. ಬಂಡಾಯ ಶಾಸಕರು ಮುಂಬೈ ತಲುಪುವುದಾಗಿ ಹೇಳಿದ್ದರೆ, ರಾಜ್ಯಪಾಲರ ಆದೇಶದವನ್ನು ಎಂವಿಎ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ತುರ್ತು ವಿಚಾರಣೆ ನಡೆಸಲು ಕೋರ್ಟ್‌ ಸಮ್ಮತಿಸಿದ್ದು, ಇಂದು ಸಂಜೆ 5ಕ್ಕೆ ಸಮಯ ನಿಗದಿಪಡಿಸಿದೆ.

ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ್ದು, 'ಔಪಚಾರಿಕ ನಿಯಮಗಳನ್ನು ಪೂರ್ಣಗೊಳಿಸಲು' ಗುರುವಾರ ಮುಂಬೈಗೆ ಹಿಂದಿರುಗುವುದಾಗಿ ತಿಳಿಸಿದ್ದಾರೆ.

ಗುಜರಾತ್‌ನ ಸೂರತ್‌ನಿಂದ ಚಾರ್ಟರ್ಡ್‌ ವಿಮಾನಗಳ ಮೂಲಕ ಮಹಾರಾಷ್ಟ್ರದ ಬಂಡಾಯ ಶಾಸಕರು ಜೂನ್‌ 22ರಂದು ಗುವಾಹಟಿಗೆ ತಲುಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.