ADVERTISEMENT

'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಕರೆ; ಮಾರುತಿ ಸುಜುಕಿ ಕಂಪನಿಯ ಮೊದಲ ಇ.ವಿ ಕಾರು ಅನಾವರಣ

ಪಿಟಿಐ
Published 26 ಆಗಸ್ಟ್ 2025, 10:17 IST
Last Updated 26 ಆಗಸ್ಟ್ 2025, 10:17 IST
<div class="paragraphs"><p>ಇ-ವಿಟಾರಾ ವಿದ್ಯುತ್ ಚಾಲಿತ ಕಾರು ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ</p></div>

ಇ-ವಿಟಾರಾ ವಿದ್ಯುತ್ ಚಾಲಿತ ಕಾರು ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

   

(ಪಿಟಿಐ ಚಿತ್ರ)

ಅಹಮದಾಬಾದ್‌: ‘ಸ್ವದೇಶಿ ಎಂಬುದು ಪ್ರತಿಯೊಬ್ಬರ ಜೀವನದ ಮಂತ್ರವಾಗಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.

ADVERTISEMENT

ಮಾರುತಿ ಸುಜುಕಿಯ ಹಂಸಲಪುರ ಘಟಕದಲ್ಲಿ ಮೊದಲ ವಿದ್ಯುತ್‌ ಚಾಲಿತ (ಇ.ವಿ) ಕಾರು ‘ಇ–ವಿಟಾರಾ’ವನ್ನು ಮಂಗಳವಾರ ಅನಾವರಣಗೊಳಿಸಿ ಅವರು ಮಾತನಾಡಿದರು.

‘ಜನರು ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ದೇಶದ ಉತ್ಪಾದಕರಿಗೆ ನೆರವಾಗಬೇಕು. ಸ್ವದೇಶಿ ತತ್ವವನ್ನು ಹೆಮ್ಮೆಯಿಂದ ಅಪ್ಪಿಕೊಳ್ಳಬೇಕು. ಈ ನೆಲದಲ್ಲಿ ತಯಾರಾದ ಜಪಾನ್‌ನ ವಸ್ತುಗಳು ಸಹ ಸ್ವದೇಶದವೇ ಆಗಿವೆ’ ಎಂದು ತಿಳಿಸಿದರು.

‘ಸ್ವದೇಶಿ ಕುರಿತ ನನ್ನ ವ್ಯಾಖ್ಯಾನ ತೀರಾ ಸರಳ. ಹೂಡಿಕೆಯಾದ ಹಣವು ಯಾರಿಗೆ ಸೇರಿದ್ದು? ಅದು ಡಾಲರ್‌, ಪೌಂಡ್‌ ಅಥವಾ ಕಪ್ಪು–ಬಿಳಿ ಹಣವೇ? ಎಂಬುದರ ಬಗ್ಗೆ ನನಗೆ ಕಾಳಜಿ ಇಲ್ಲ. ಆದರೆ, ಆ ಹಣದಿಂದ ಯಾವುದೇ ವಸ್ತು ತಯಾರಾದರೂ ಬೆವರು ನನ್ನ ದೇಶವಾಸಿಗಳದ್ದಾಗಿರಬೇಕು. ಆ ವಸ್ತುಗಳಿಗೆ ಇಲ್ಲಿನ ಮಣ್ಣಿನ ಪರಿಮಳ ಇರುತ್ತದೆ’ ಎಂದು ಹೇಳಿದರು.

2012ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಹಂಸಲಪುರದಲ್ಲಿ ಮಾರುತಿ ಸುಜುಕಿಗೆ ಭೂಮಿ ಮಂಜೂರು ಮಾಡಿದ್ದ ಕುರಿತು ಮೋದಿ ಅವರು ನೆನಪು ಮಾಡಿಕೊಂಡರು.

‘ಆ ದಿನಗಳಲ್ಲೇ ಮೇಕ್‌ ಇನ್‌ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತದ ಬಗ್ಗೆ ದೂರದೃಷ್ಟಿ ಹೊಂದಿದ್ದೆ’ ಎಂದು ಹೇಳಿದರು. 

‘ಮೇಕ್‌ ಇನ್‌ ಇಂಡಿಯಾಕ್ಕೆ ಇಂದು ಶುಭದಿನ. ದೇಶದಲ್ಲಿ ತಯಾರಿಸಿದ ವಿದ್ಯುತ್‌ ಚಾಲಿತ ಕಾರುಗಳನ್ನು 100 ದೇಶಗಳಿಗೆ ರಫ್ತು ಮಾಡಲಾಗುತ್ತದೆ’ ಎಂದರು.

‘2047ರಲ್ಲಿ ಭವಿಷ್ಯದ ಪೀಳಿಗೆಯು ನಿಮ್ಮ ತ್ಯಾಗ ಹಾಗೂ ಕೊಡುಗೆ ಬಗ್ಗೆ ಹೆಮ್ಮೆ ಪಡುವಂತೆ ಭಾರತವನ್ನು ಅಭಿವೃದ್ಧಿಗೊಳಿಸಬೇಕು. ನಿಮ್ಮ ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ‘ಆತ್ಮನಿರ್ಭರ ಭಾರತ’ ಮಂತ್ರವನ್ನು ಸಾಕಾರಗೊಳಿಸಲು ದೇಶದ ನಿವಾಸಿಗಳಿಗೆ ನಾನು ಕರೆ ನೀಡುತ್ತಿದ್ದೇನೆ. ಬನ್ನಿ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡೋಣ’ ಎಂದರು.

‘ಬ್ಯಾಟರಿಗಳ ತಯಾರಿಕೆ ಅತಿಮುಖ್ಯ’

‘ಇ.ವಿ ವ್ಯವಸ್ಥೆಯಲ್ಲಿ ಬ್ಯಾಟರಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇ.ವಿ ಉತ್ಪಾದನೆಯನ್ನು ಬಲಪಡಿಸಬೇಕಾದರೆ ಭಾರತದಲ್ಲಿ ಬ್ಯಾಟರಿಗಳ ತಯಾರಿಕೆಯೂ ಮುಖ್ಯವಾಗಿತ್ತು. ಹೀಗಾಗಿ ಲಿಥಿಯಂ–ಐಯಾನ್‌ ಬ್ಯಾಟರಿ ಕೋಶ ಹಾಗೂ ಎಲೆಕ್ಟ್ರೋಡ್‌ ತಯಾರಿಸುವ ‘ಟಿಡಿಎಸ್‌ ಲಿಥಿಯಂ–ಐಯಾನ್‌ ಬ್ಯಾಟರಿ ಗುಜರಾಜ್‌ ಪ್ರೈ.ಲಿ.’ ಕಂಪನಿ ಸ್ಥಾಪನೆಗೆ 2017ರಲ್ಲಿ ಗುಜರಾತ್‌ನಲ್ಲಿ ಅಡಿಗಲ್ಲು ಹಾಕಿದ್ದೆ. ಭಾರತದಲ್ಲಿ ಮೊದಲ ಬಾರಿಗೆ ಜಪಾನ್‌ನ ಮೂರು ಕಂಪನಿಗಳು ಬ್ಯಾಟರಿ ಕೋಶಗಳನ್ನು ತಯಾರಿಸಲು ಮುಂದೆ ಬಂದಿದ್ದವು’ ಎಂದು ಪ್ರಧಾನಿ ನೆನಪು ಮಾಡಿಕೊಂಡರು.

‘ಭಾರತದಲ್ಲಿ ಕಳೆದ ದಶಕದಿಂದ ಎಲೆಕ್ಟ್ರಾನಿಕ್ಸ್‌ ವಸ್ತುಗಳ ತಯಾರಿಕೆಯು ಶೇ 500ರಷ್ಟು ಮೊಬೈಲ್‌ ಫೋನ್‌ ತಯಾರಿಕೆ ಶೇ 2700 ಹಾಗೂ ರಕ್ಷಣಾ ಸಾಮಗ್ರಿಗಳ ತಯಾರಿಕೆಯು ಶೇ 200ರಷ್ಟು ಹೆಚ್ಚಾಗಿದೆ’ ಎಂದು ವಿವರಿಸಿದರು.

ಇಡೀ ಜಗತ್ತೇ ಭಾರತದ ಕಡೆ ತಿರುಗಿ ನೋಡುತ್ತಿದೆ. ಇಂಥ ಸಂದರ್ಭದಲ್ಲಿ ಯಾವ ರಾಜ್ಯವೂ ಹಿಂದೆ ಬೀಳಬಾರದು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ನರೇಂದ್ರ ಮೋದಿ ಪ್ರಧಾನಿ

ಗುಜರಾತ್‌ನ ಅಹಮದಾಬಾದ್‌ ಸಮೀಪವಿರುವ ಮಾರುತಿ ಸುಜುಕಿಯ ಹಂಸಲಪುರ ಘಟಕದ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬ್ಯಾಟರಿ ಕೋಶಗಳ ಕುರಿತು ಮಾಹಿತಿ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.