ನಿವೃತ್ತ ಮೇಜರ್ ರಮೇಶ್ ಉಪಾಧ್ಯಾಯ
ಬಲಿಯಾ(ಉತ್ತರ ಪ್ರದೇಶ): ‘ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮುಖಂಡ ಇಂದ್ರೇಶ್ ಕುಮಾರ್ ಅವರನ್ನು ಹೆಸರಿಸುವಂತೆ ಜೈಲಿನಲ್ಲಿದ್ದಾಗ ನನಗೆ ಚಿತ್ರಹಿಂಸೆ ನೀಡಲಾಯಿತು’ ಎಂದು ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ ಭಾನುವಾರ ಹೇಳಿದ್ದಾರೆ.
ಬಾಂಬ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಉಪಾಧ್ಯಾಯ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯ ಇತ್ತೀಚೆಗೆ ಖುಲಾಸೆಗೊಳಿಸಿದೆ. ಬಲಿಯಾ ಜಿಲ್ಲೆಯ ರಾಮನಗರದವರಾದ ಉಪಾಧ್ಯಾಯ ಅವರನ್ನು 2008ರ ಅಕ್ಟೋಬರ್ 28ರಂದು ಬಂಧಿಸಲಾಗಿತ್ತು.
‘ಯೋಗಿ ಆದಿತ್ಯನಾಥ, ಮೋಹನ್ ಭಾಗವತ್, ಶ್ರೀ ಶ್ರೀ ರವಿಶಂಕರ್ ಹಾಗೂ ಇಂದ್ರೇಶ್ ಕುಮಾರ್ ಅವರ ಹೆಸರನ್ನು ವಿಚಾರಣೆ ವೇಳೆ ಪೊಲೀಸರು ಪದೇಪದೇ ಉಲ್ಲೇಖಸುತ್ತಿದ್ದರು’ ಎಂದು ಹೇಳಿದ್ದಾರೆ.
‘ಪೊಲೀಸರು ಕಸ್ಟಡಿಗೆ ತೆಗೆದುಕೊಂಡ ಕ್ಷಣದಿಂದಲೇ ನನಗೆ ವಿಪರೀತ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಯಿತು. ನಾನು ನಿರಪರಾಧಿ ಎಂಬುದು ನನಗೆ ಗೊತ್ತಿತ್ತು. ಇದೇ ಕಾರಣಕ್ಕೆ ಸುಳ್ಳುಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆಗಳಿಗೆ ಸ್ವತಃ ನಾನೇ ಒಳಗಾಗಿದ್ದೆ. ಆದರೆ, ಈ ಪರೀಕ್ಷೆಗಳ ವರದಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲೇ ಇಲ್ಲ’ ಎಂದು ಉಪಾಧ್ಯಾಯ ಹೇಳಿದ್ದಾರೆ.
‘ಒಬ್ಬನನ್ನೇ ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿತ್ತು. ನನ್ನ ಬಗ್ಗೆ ಮೃದು ಧೋರಣೆ ಹೊಂದಿ, ಜೈಲಿನಿಂದ ಬೇಗ ಬಿಡುಗಡೆ ಮಾಡುವುದಕ್ಕಾಗಿ ಕೆಲ ರಾಜಕೀಯ ಮತ್ತು ಅಧ್ಮಾತ್ಮಿಕ ಮುಖಂಡರ ಹೆಸರು ಹೇಳುವಂತೆ ಅಧಿಕಾರಿಗಳು ಒತ್ತಡ ಹೇರುತ್ತಿದ್ದರು’ ಎಂದು ವಿವರಿಸಿದ್ದಾರೆ.
‘ಮಾಲೇಗಾಂವ್ ಪಟ್ಟಣಕ್ಕೆ ನಾನು ಹೋಗಿಯೇ ಇಲ್ಲ ಹಾಗೂ ಬಾಂಬ್ ಸ್ಫೋಟ ಪ್ರಕರಣಕ್ಕೂ ನನಗೂ ಸಂಬಂಧವೇ ಇಲ್ಲ’ ಎಂದು ಹೇಳಿದ್ದಾರೆ.
‘ನನ್ನ ವಿರುದ್ಧ 25 ಆರೋಪಗಳನ್ನು ಹೊರಿಸಲಾಗಿತ್ತು. ಎಲ್ಲವೂ ಸುಳ್ಳು ಎಂಬುದು ನ್ಯಾಯಾಲಯದಲ್ಲಿ ಸಾಬೀತಾದವು. 17 ವರ್ಷಗಳ ನಂತರ ಕೊನೆಗೂ ನನಗೆ ನ್ಯಾಯ ಸಿಕ್ಕಿದೆ’ ಎಂದು ಹೇಳಿದ್ದಾರೆ.
‘ನಾನು ಮುಗ್ಧ ಎಂಬುದನ್ನು ಸಾಂಕೇತಿಕವಾಗಿ ತೋರಿಸುವುದಕ್ಕಾಗಿ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸ್ಪರ್ಧಿಸಿದ್ದೆ. ಈಗ ಅಂತಹ ಯಾವುದೇ ರಾಜಕೀಯ ಮಹತ್ವಾಕಾಂಕ್ಷೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಇದು ಆಗಿನ ಯುಪಿಎ ಸರ್ಕಾರದ ಆಣತಿಯಂತೆ ನಡೆದ ರಾಜಕೀಯ ಪ್ರೇರಿತ ತನಿಖೆಯಾಗಿತ್ತು. ಸೋನಿಯಾ ಗಾಂಧಿ ದಿಗ್ವಿಜಯ್ ಸಿಂಗ್ ಸುಶೀಲ್‌ಕುಮಾರ್ ಶಿಂದೆಯಂತಹ ನಾಯಕ ಒತ್ತಡದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದರು.-ರಮೇಶ ಉಪಾಧ್ಯಾಯ, ನಿವೃತ್ತ ಮೇಜರ್
‘ಸತ್ಯಮೇವ ಜಯತೇ’ ಸಾಬೀತು: ಠಾಕೂರ್
ಭೋಪಾಲ್: ‘ನಮ್ಮ ಧರ್ಮಗ್ರಂಥಗಳು ಹೇಳುವ ‘ಸತ್ಯಮೇವ ಜಯತೇ’ ಎಂಬ ಮಾತು ಸಾಬೀತಾಗಿದೆ. ಕೇಸರಿ ಭಯೋತ್ಪಾದನೆ ಎಂಬ ಪದ ಸೃಷ್ಟಿ ಮಾಡಿದವರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ’ ಎಂದು ಬಿಜೆಪಿಯ ಮಾಜಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಭಾನುವಾರ ಹೇಳಿದ್ದಾರೆ. ‘ಮಾಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ನನ್ನನ್ನು ಖುಲಾಸೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಹಿಂದುತ್ವಕ್ಕೆ ಸಂದ ಜಯ’ ಎಂದೂ ಹೇಳಿದ್ದಾರೆ. ಇಲ್ಲಿನ ರಾಜಾ ಭೋಜ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಇದು ಹಿಂದುತ್ವ ಹಾಗೂ ಧರ್ಮಕ್ಕೆ ಸಂದ ಜಯ. ಕೇಸರಿ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿಸಿದವರಿಗೆ ಸಮಾಜ ಹಾಗೂ ದೇಶವು ತಕ್ಕ ಉತ್ತರ ನೀಡಿದಂತಾಗಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.