ADVERTISEMENT

‘ದೀದಿ’ ನಾಡಿನಲ್ಲಿ ಮೋದಿ ವಿರುದ್ಧ ಗುಡುಗು: ರ‍್ಯಾಲಿಯಲ್ಲಿ ಐದು ಲಕ್ಷ ಜನ ಭಾಗಿ

ವೇದಿಕೆಯಲ್ಲಿ 20ಕ್ಕೂ ಹೆಚ್ಚು ವಿಪಕ್ಷಗಳ ನಾಯಕರು

ಪಿಟಿಐ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST
ಕೋಲ್ಕತ್ತದಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ವಿರೋಧ ಪಕ್ಷಗಳ ರ‍್ಯಾಲಿಯಲ್ಲಿ ಕಂಡುಬಂದ ಜನಸಾಗರ
ಕೋಲ್ಕತ್ತದಲ್ಲಿ ಶನಿವಾರ ತೃಣಮೂಲ ಕಾಂಗ್ರೆಸ್‌ ನೇತೃತ್ವದಲ್ಲಿ ನಡೆದ ವಿರೋಧ ಪಕ್ಷಗಳ ರ‍್ಯಾಲಿಯಲ್ಲಿ ಕಂಡುಬಂದ ಜನಸಾಗರ   

ಕೋಲ್ಕತ್ತ: ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯುದ್ಧ ಸಾಮಗ್ರಿಗಳ ವೀಕ್ಷಿಸುತ್ತಿದ್ದರೆ, ಇತ್ತ ಕೋಲ್ಕತ್ತದಲ್ಲಿ ಲಕ್ಷಾಂತರ ಕಾರ್ಯಕರ್ತರ ಹರ್ಷೋದ್ಘಾರಗಳ ನಡುವೆ ವಿರೋಧ ಪಕ್ಷಗಳು ನಾಯಕರು ಮೋದಿ ವಿರುದ್ಧ ಅಬ್ಬರಿಸಿದರು.

ಟಿಎಂಸಿ ನಾಯಕಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ನಿರೀಕ್ಷೆಯಂತೆ 20ಕ್ಕೂ ಹೆಚ್ಚು ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.

ರ‍್ಯಾಲಿಯಲ್ಲಿ ಐದು ಲಕ್ಷ ಜನರು ಭಾಗವಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್, ಶರದ್‌ ಯಾದವ್‌, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ನ್ಯಾಶನಲ್‌ ಕಾನ್ಫೆರೆನ್ಸ್‌ ಮುಖಂಡ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ಭಾಗವಹಿಸಿದ್ದರು.

ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮತ್ತು ಬಂಡಾಯ ನಾಯಕರಾದ ಯಶವಂತ್‌ ಸಿನ್ಹಾ ಮತ್ತು ಅರುಣ್‌ ಶೌರಿ ವೇದಿಕೆಯಲ್ಲಿದ್ದರು.

ಗೈರು: ನಿರೀಕ್ಷೆಯಂತೆ ಎಡ ಪಕ್ಷಗಳು, ಟಿಆರ್‌ಎಸ್‌ ನಾಯಕ ಕೆ. ಚಂದ್ರಶೇಖರ್‌ ರಾವ್‌, ಬಿಜೆಡಿ ನಾಯಕ ನವೀನ್ ಪಟ್ನಾಯಕ್‌, ವೈಎಸ್‌ಆರ್‌ ಕಾಂಗ್ರೆಸ್‌ ನಾಯಕ ಜಗನ್‌ಮೋಹನ್‌ ರೆಡ್ಡಿ ರ‍್ಯಾಲಿಯಲ್ಲಿ ಭಾಗವಹಿಸಿರಲಿಲ್ಲ.

ಜಾತ್ಯತೀತ ಮೌಲ್ಯಗಳ ಮರುಸ್ಥಾಪನೆ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತೀಯ ಏಕತಾ ರ‍್ಯಾಲಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಶುಭ ಕೋರಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತಿಳಿಸಿದರು.

ಮುಂಬರುವ ಲೋಕಸಭಾ ಚುನಾವಣೆ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳನ್ನು ಮರು ಸ್ಥಾಪಿಸುವ ದಿಸೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದರು.

ಬಜೆಟ್‌ ಅಧಿವೇಶನದಲ್ಲಿ ರಫೇಲ್‌ ಪ್ರಸ್ತಾಪ: ‘ಲೋಕಸಭೆಯ ಬಜೆಟ್‌ ಅಧಿವೇಶನದಲ್ಲಿ ರಫೇಲ್‌ ಒಪ್ಪಂದ ವಿವಾದ, ರೈತರ ಸಮಸ್ಯೆ, ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಸಿಬಿಐ ಸೇರಿ ಮುಂತಾದ ತನಿಖಾ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಕುರಿತು ನಮ್ಮ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಸ್ತಾಪ ಮಾಡಲಿದ್ದಾರೆ‘ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ವಾಕ್‌ ಸ್ವಾತಂತ್ರ್ಯ ಮತ್ತು ಧರ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜಾತ್ಯತೀತ ಜನತಾ ದಳ (ಜೆಡಿಎಸ್‌) ಮೈತ್ರಿ ಸರ್ಕಾರ ಮುಂದುವರಿಯಲಿದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.

ಮೈತ್ರಿಯಿಂದ ಬಿಜೆಪಿಗೆ ಸಂಕಷ್ಟ

ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ಮೈತ್ರಿಯಿಂದ ದೇಶದಲ್ಲಿ ಸಂತೋಷದ ಅಲೆ ಸೃಷ್ಟಿಯಾಗಿದೆ. ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದಲ್ಲಿ ಒಂದು ಕ್ಷೇತ್ರವನ್ನಾದರೂ ಗೆಲ್ಲಲು ಬಿಜೆಪಿ ತಂತ್ರ ಗಾರಿಕೆ ನಡೆಸುತ್ತಿದೆ. ಬಿಜೆಪಿಯವರು ಪ್ರಧಾನಿ ಅಭ್ಯರ್ಥಿ ಯಾರು ಎಂದು ವಿರೋಧ ಪಕ್ಷಗಳನ್ನು ಕೇಳುತ್ತಿದ್ದಾರೆ. ಜನರೇ ಇದನ್ನು ನಿರ್ಧರಿಸಲಿದ್ದಾರೆ.

ಅಖಿಲೇಶ್‌ ಯಾದವ್‌,ಅಧ್ಯಕ್ಷ, ಸಮಾಜವಾದಿ ಪಕ್ಷ

ಸರ್ಕಾರ ಕಿತ್ತೆಸೆಯುವ ಕೆಲಸ ಆರಂಭ

ದಲಿತ ಹಾಗೂ ಅಲ್ಪಸಂಖ್ಯಾತರ ವಿರೋಧಿ ಎನ್‌ಡಿಎ ಸರ್ಕಾರವನ್ನು ಬೇರು ಸಮೇತ ಕಿತ್ತೆಸೆಯುವ ಕೆಲಸವನ್ನು ಬಹುಜನ ಸಮಾಜ ಪಕ್ಷ ಹಾಗೂ ಸಮಾಜವಾದಿ ಪಕ್ಷ ಮೈತ್ರಿಯು ಉತ್ತರ ಪ್ರದೇಶದಲ್ಲಿ ಆರಂಭಿಸಿದೆ.

ಸತೀಶ್‌ ಚಂದ್ರ ಮಿಶ್ರಾ,ಬಹುಜನ ಸಮಾಜ ಪಾರ್ಟಿ ನಾಯಕ

ಜನರಿಗೆ ಮೋಸ ಮಾಡಿದ ಬಿಜೆಪಿ

ಮೋದಿ ಪ್ರಚಾರದ ಗೀಳು ಹೊಂದಿರುವ ಪ್ರಧಾನಿಯೇ ಹೊರತು, ಕೆಲಸ ಮಾಡುವ ಪ್ರಧಾನಿ ಅಲ್ಲ. 2014ರ ಚುನಾವಣೆಗೂ ಮುನ್ನ ನೀಡಿದ್ದ ಯಾವುದೇ ಭರವಸೆಗಳನ್ನು ಅವರು ಈಡೇರಿಸಿಲ್ಲ. ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಹೇಳಿದ್ದ ಪ್ರಧಾನಿ ಭ್ರಷ್ಟಾಚಾರ ಪೋಷಿಸುತ್ತಿದ್ದಾರೆ.

ಎನ್‌.ಚಂದ್ರಬಾಬು ನಾಯ್ಡು,ಮುಖ್ಯಮಂತ್ರಿ, ಆಂಧ್ರ ಪ್ರದೇಶ

ಸ್ವಾತಂತ್ರ್ಯಕ್ಕಾಗಿ ಎರಡನೇ ಹೋರಾಟ

ಮುಂಬರುವ ಸಾರ್ವತ್ರಿಕ ಚುನಾವಣೆಯು ಸ್ವಾತಂತ್ರಕ್ಕಾಗಿ ಎರಡನೇ ಹೋರಾಟ ಆಗಲಿದೆ. ಹಿಂದುತ್ವ ಹಾಗೂ ತೀವ್ರವಾದ ಹಿಂದೂ ಧರ್ಮದ ವಿಷ ಬೀಜವನ್ನು ಬಿತ್ತುತ್ತಿರುವ ಬಿಜೆಪಿಯ ವಿರುದ್ಧ ಹೋರಾಡುವ ಅಗತ್ಯವಿದೆ.

ಜನರನ್ನು ಮರೆತಿರುವ ಬಿಜೆಪಿ ಸರ್ಕಾರ, ಕಾರ್ಪೋರೇಟ್‌ ಸಂಸ್ಥೆಗಳಿಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಮೋದಿ ಅವರು ಮತ್ತೆ ಅಧಿಕಾರಕ್ಕೆ ಬಂದರೆ ದೇಶ 50 ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ.

ಎಂ.ಕೆ. ಸ್ಟಾಲಿನ್,ಅಧ್ಯಕ್ಷ, ಡಿಎಂಕೆ

ಇವಿಎಂ ಕಳ್ಳ ಯಂತ್ರಗಳು

ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ‘ಕಳ್ಳ ಯಂತ್ರಗಳು’. ಆದ್ದರಿಂದ, ಅವುಗಳ ಬಳಕೆ ನಿಲ್ಲಿಸಬೇಕು. ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮೊದಲಿದ್ದ ಮತಪತ್ರ ವ್ಯವಸ್ಥೆಯನ್ನೇ ಜಾರಿಗೆ ತರಬೇಕು. ವಿಶ್ವದಲ್ಲಿ ಎಲ್ಲಿಯೂ ಇವಿಎಂ ಉಪಯೋಗಿಸುವುದಿಲ್ಲ. ವಿರೋಧ ಪಕ್ಷಗಳು ಒಂದಾಗಿ ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡಬೇಕು.

ಫಾರೂಕ್‌ ಅಬ್ದುಲ್ಲಾ,ನ್ಯಾಶನಲ್‌ ಕಾನ್ಫೆರೆನ್ಸ್‌ ಮುಖಂಡ

ದ್ವೇಷ ಹುಟ್ಟಿಸುತ್ತಿರುವ ಬಿಜೆಪಿ

ಬಿಜೆಪಿ ದೇಶದಲ್ಲಿ ಧರ್ಮದ ಆಧಾರದ ಮೇಲೆ ಜನರ ನಡುವೆ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದೆ. ಜತೆಗೆ ದೇಶವನ್ನು ವಿಭಜಿಸುವ ಕೆಲಸ ಮಾಡುತ್ತಿದೆ. ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೋಡಿಯು 2019ರ ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ, ಸಂವಿಧಾನವನ್ನೇ ಬದಲಿಸಲಿದೆ. ಜರ್ಮನಿಯಲ್ಲಿಹಿಟ್ಲರ್‌ ನಡೆಸಿದ ಆಡಳಿತದಂತೆ, ಇಲ್ಲಿಯೂ ಸರ್ವಾಧಿಕಾರಿ ಆಡಳಿತ ಜಾರಿಯಾಗಲಿದೆ.

ಅರವಿಂದ್‌ ಕೇಜ್ರಿವಾಲ್‌,ಮುಖ್ಯಮಂತ್ರಿ, ದೆಹಲಿ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.