
ಮಲ್ಕನಗಿರಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ನಕ್ಸಲ್ ಮುಕ್ತ ಭಾರತ’ದ ಗುರಿಗೆ ಮತ್ತಷ್ಟು ಪುಷ್ಟಿ ನೀಡುವ ನಿಟ್ಟಿನಲ್ಲಿ ಪುನರ್ವಸತಿ ಬಯಸಿ 22 ನಕ್ಸಲರು ಸ್ವಯಂಪ್ರೇರಿತರಾಗಿ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಒಡಿಶಾ ಪೊಲೀಸರ ಎದುರು ಶರಣಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ವಾರ ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಒಟ್ಟು ₹84 ಲಕ್ಷ ಇನಾಮು ಘೊಷಣೆಯಾಗಿದ್ದ 34 ನಕ್ಸಲರು ಪೊಲೀಸರ ಎದುರು ಶರಣಾಗಿದ್ದರು.
ಏಳು ಮಹಿಳೆಯರು ಸೇರಿದಂತೆ 34 ನಕ್ಸಲರು ಭದ್ರತಾ ಪಡೆಗಳಿಗೆ ಶರಣಾಗಿದ್ದರು. ಶರಣಾದ ನಕ್ಸಲರನ್ನು ತೆಲಂಗಾಣ ರಾಜ್ಯ ಸಮಿತಿ ಮತ್ತು ಆಂಧ್ರ-ಒಡಿಶಾ ಗಡಿ (ಎಒಬಿ) ವಿಭಾಗದ ಸದಸ್ಯರು ಎಂದು ಗುರುತಿಸಲಾಗಿದೆ. ರಾಜ್ಯ ಸರ್ಕಾರದ ಪುನರ್ವಸತಿ ಉಪಕ್ರಮದ ಯೋಜನೆ ಅಡಿಯಲ್ಲಿ ನಕ್ಸಲರ ಶರಣಾಗತಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ನಕ್ಸಲ್‌ವಾದದ ಮೇಲೆ ಪ್ರಾಬಲ್ಯ ಸ್ಥಾಪಿಸುವ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರ್ಕಾರವು 2026ರ ಮಾರ್ಚ್ 31ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) 2019ರಿಂದ ಇಲ್ಲಿಯವರೆಗೆ ಆರು ಪ್ರಮುಖ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಒಟ್ಟು 229 ಫಾರ್ವರ್ಡ್ ಆಪರೇಟಿಂಗ್ ಬೇಸ್‌ಗಳನ್ನು (ಎಫ್‌ಒಬಿ) ಸ್ಥಾಪಿಸಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಛತ್ತೀಸಗಢ, ಒಡಿಶಾ, ಮಹಾರಾಷ್ಟ್ರ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ತೆಲಂಗಾಣದಲ್ಲಿ ಫಾರ್ವರ್ಡ್ ಆಪರೇಟಿಂಗ್ ಬೇಸ್‌ಗಳನ್ನು ಸ್ಥಾಪಿಸಲಾಗಿದೆ ಅವರು ವಿವರಿಸಿದ್ದಾರೆ.ನಕ್ಸಲರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.