ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ರಾಯಪುರ (ಛತ್ತೀಸಗಢ): ಶಾಂತಿ ಮಾತುಕತೆಗಾಗಿ ಶಸ್ತ್ರಾಸ್ತ್ರ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದಾಗಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆ ಪ್ರಕಟಣೆ ಹೊರಡಿಸಿದೆ. ಶಾಂತಿ ಮಾತುಕತೆ ಪ್ರಕ್ರಿಯೆಗೆ ಒಂದು ತಿಂಗಳು ಭದ್ರತಾ ಪಡೆಗಳ ಕಾರ್ಯಾಚರಣೆ ಸ್ಥಗಿತಗೊಳಿಸಿ, ಕದನ ವಿರಾಮ ಘೋಷಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದೆ.
ಈ ಪ್ರಕಟಣೆಯು ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಛತ್ತೀಸಗಢ ಸರ್ಕಾರ ತಿಳಿಸಿದೆ.
ನಿಮ್ಮ ನಿರ್ಧಾರವನ್ನು ಸಾಮಾಜಿಕ ಜಾಲತಾಣ, ರೆಡಿಯೊ ಸೇರಿ ಸರ್ಕಾರ ಸುದ್ದಿ ವಾಹಿನಿಗಳಲ್ಲಿ ಪ್ರಸಾರ ಮಾಡಬೇಕು ಎಂದು ಮಾವೋವಾದಿಗಳು ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಆಗಸ್ಟ್ 15ರ ದಿನಾಂಕ ಇರುವ ಎರಡು ಪುಟಗಳ ಪ್ರಕಟಣೆಯು ಮಾವೋವಾದಿಗಳ ಕೇಂದ್ರ ಸಮಿತಿಯ ವಕ್ತರ ಅಭಯ್ ಅವರ ಹೆಸರಿನಲ್ಲಿದೆ. ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾವೋವಾದಿ) ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಎಂಬವರು ಛತ್ತೀಸಗಢದ ಬಸ್ತಾರ್ ವಲಯದಲ್ಲಿ ನಡೆದ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ನಾಲ್ಕು ತಿಂಗಳ ಬಳಿಕ ಈ ಪ್ರಕಟಣೆ ಬಂದಿದೆ.
‘ಪತ್ರದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸುತ್ತೇವೆ. ಶರಣಾಗಿ, ಪುನರ್ವಸತಿ ಲಾಭಗಳನ್ನು ಪಡೆಯುವುದು ಮಾವೋವಾದಿಗಳಿಗಿರುವ ಉತ್ತಮ ಆಯ್ಕೆ’ ಎಂದು ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಹೇಳಿದ್ದಾರೆ.
ಯುದ್ಧದ ವಾತಾವರಣ ಇಲ್ಲದಿರುವುದರಿಂದ ಅವರು ಬಳಸಿದ್ದ ‘ಕದನ ವಿರಾಮ’ ಎನ್ನುವ ಪದ ಆಕ್ಷೇಪಾರ್ಹ. ಪ್ರಜಾಪ್ರಭುತ್ವದಲ್ಲಿ ಮಾತುಕತೆ ಷರತ್ತಿನೊಂದಿಗೆ ನಡೆಸಲು ಸಾಧ್ಯವಿಲ್ಲ. ಅವರು ಮತ್ತೊಮ್ಮೆ ಷರತ್ತಿನೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ. ನಾವು ಈ ಹಿಂದೆ ಕೂಡ ಕದನ ವಿರಾಮದ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟು, ಒಂದು ತಿಂಗಳಿನಲ್ಲಿ ಪಕ್ಷದ ಉನ್ನತ ನಾಯಕತ್ವವನ್ನು ಸಂಪರ್ಕಿಸಲು ಕೋರಲಾಗಿತ್ತು. ಆದರೆ ದುರದೃಷ್ಟವಶಾತ್ ಕೇಂದ್ರ ಸರ್ಕಾರ ಈ ಬಗ್ಗೆ ಯಾವುದೇ ಅನುಕೂಲಕರ ನಿಲುವು ತೆಗೆದುಕೊಳ್ಳದೆ, ಕಾರ್ಯಾಚರಣೆಯನ್ನು ತೀವ್ರಗೊಳಿಸಿತ್ತು ಎಂದು ಪ್ರಕಟಣೆಯಲ್ಲಿ ಮಾವೋವಾದಿಗಳು ಹೇಳಿದ್ದಾರೆ.
‘ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿವಂಗತ ಬಸವರಾಜು ಅವರ ಪ್ರಾರಂಭಿಸಿದ್ದ ಶಾಂತಿ ಮಾತುಕತೆಯನ್ನು ನಾವು ಮುಂದುವರಿಸುತ್ತಿದ್ದೇವೆ. ಬದಲಾದ ರಾಷ್ಟ್ರೀಯ ಹಾಗೂ ಜಾಗತಿಕ ಸನ್ನಿವೇಶದಿಂದಾಗಿ ಹಾಗೂ ಶಸ್ತ್ರಾಸ್ತ್ರ ಬದಿಗಿಟ್ಟು ಮುಖ್ಯವಾಹಿನಿಗೆ ಬರಬೇಕು ಎನ್ನುವ ದೇಶದ ಪ್ರಧಾನ ಮಂತ್ರಿ, ಕೇಂದ್ರ ಗೃಹ ಸಚಿವ ಹಗೂ ಹಿರಿಯ ಪೊಲೀಸ್ ಅಧಿಕಾರಿಗಳ ಮನವಿಯನ್ನು ಪರಿಗಣಿಸಿ ನಾವು ಶಸ್ತ್ರಾಸ್ತ್ರಗಳನ್ನು ದೂರವಿಡಲು ನಿರ್ಧರಿಸಿದ್ದೇವೆ’ ಎಂದು ಪ್ರಕಟಣೆ ತಿಳಿಸಿದೆ.
‘ಶಸ್ತ್ರಾಸ್ತ್ರ ಹೋರಾಟಕ್ಕೆ ನಾವು ತಾತ್ಕಾಲಿಕ ವಿರಾಮ ಹಾಕಲು ನಿರ್ಧರಿಸಿದ್ದೇವೆ. ಸಾರ್ವಜನಿಕರಿಗಾಗಿ ಹೋರಾಟ ಮಾಡುವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳೊಂದಿಗೆ ನಾವು ಭವಿಷ್ಯದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇವೆ’ ಎಂದು ಪ್ರಕಟಣೆಯಲ್ಲಿ ಮಾವೋವಾದಿಗಳು ತಿಳಿಸಿದ್ದಾರೆ.
‘ನಾವು ಕೇಂದ್ರ ಗೃಹ ಸಚಿವರೊಂದಿಗೆ ಅಥವಾ ಅವರು ಗೊತ್ತು ಮಾಡಿದ ವ್ಯಕ್ತಿ ಯಾ ತಂಡದೊಂದಿಗೆ ಮಾತುಕತೆ ನಡೆಸಲು ಸಿದ್ದರಿದ್ದೇವೆ. ಆದರೆ ನಮ್ಮ ಬದಲಾದ ಅಭಿಪ್ರಾಯಗಳನ್ನು ಪಕ್ಷದ ನಾಯಕತ್ವಕ್ಕೆ ನಾವು ತಿಳಿಸಬೇಕಿದೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಹಾಗೂ ಜೈಲಿನಲ್ಲಿರುವ ನಮ್ಮ ಕಾಮ್ರೇಡ್‌ಗಳನ್ನು ಭೇಟಿಯಾಗಲು ಒಂದು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರುತ್ತೇವೆ’ ಎಂದು ಹೇಳಿದ್ದಾರೆ.
‘ಮೊದಲನೆಯದಾಗಿ ವಿಡಿಯೊ ಕರೆಯ ಮೂಲಕ ನಮ್ಮ ಅಭಿಪ್ರಾಯಗಳನ್ನು ಸರ್ಕಾರದ ಮುಂದೆ ಇಡಲು ನಾವು ಸಜ್ಜಾಗಿದ್ದೇವೆ. ಹೀಗಾಗಿ ಒಂದು ತಿಂಗಳ ಮಟ್ಟಿಗೆ ಕದನ ವಿರಾಮ ಘೋಷಿಸಿ, ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಿ, ಶಾಂತಿ ಮಾತುಕತೆ ಪ್ರಕ್ರಿಯೆಯನ್ನು ಮುಂದುವರಿಸಲು ಸರ್ಕಾರಕ್ಕೆ ವಿನಂತಿಸುತ್ತೇವೆ’ ಎಂದು ಹೇಳಿದ್ದಾರೆ.
ವಿವಿಧ ಕಾರಣಗಳಿಂದಾಗಿ ಈ ಪ್ರಕಟಣೆ ನೀಡುವುದು ತಡವಾಯಿತು ಎಂದೂ ಅದರಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.