ADVERTISEMENT

#MeToo ಪರಿಣಾಮ: ಸಚಿವ ಸ್ಥಾನಕ್ಕೆ ಎಂ.ಜೆ. ಅಕ್ಬರ್ ರಾಜೀನಾಮೆ

ಏಜೆನ್ಸೀಸ್
Published 14 ಅಕ್ಟೋಬರ್ 2018, 7:16 IST
Last Updated 14 ಅಕ್ಟೋಬರ್ 2018, 7:16 IST
   

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ ನೀಡಿರುವುದಾಗಿ ಖಚಿತಪಡಿಸಲಾರದ ಮೂಲಗಳನ್ನು ಉಲ್ಲೇಖಿಸಿ ಕೆಲವು ಸುದ್ದಿವಾಹಿನಿಗಳು ವರದಿ ಮಾಡಿವೆ.

ಆದಾಗ್ಯೂ, ಅಕ್ಬರ್‌ ಅವರು ಪ್ರಧಾನ ಮಂತ್ರಿಗಳ ಮುಖ್ಯ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಜತೆಗೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಗೆ ಸಮಯ ಕೋರಿದ್ದಾರೆ ಎಂದುಮೂಲಗಳನ್ನು ಉಲ್ಲೇಖಿಸಿ ನ್ಯೂಸ್18 ಸುದ್ದಿ ವಾಹಿನಿ ವರದಿ ಮಾಡಿದೆ.

ಮತ್ತೊಂದೆಡೆ,ಅಕ್ಬರ್‌ ಅವರು ರಾಜೀನಾಮೆ ನೀಡಿಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿರುವುದಾಗಿ ಟೈಮ್ಸ್ ನೌ ವರದಿ ಮಾಡಿದೆ.

ADVERTISEMENT

ಎಂ.ಜೆ. ಅಕ್ಬರ್ ವಿರುದ್ಧ ಹಲವು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಮೀ ಟೂ ಅಭಿಯಾದಲ್ಲಿ (#MeToo) ಸಚಿವರ ವಿರುದ್ಧ ಆರೋಪ ಮಾಡಲಾಗಿತ್ತು. ನಂತರ ಸಚಿವರ ರಾಜೀನಾಮೆಗೆ ಒತ್ತಡ ಹೆಚ್ಚಾಗಿತ್ತು. ನೈಜೀರಿಯಾ ಪ್ರವಾಸದಲ್ಲಿದ್ದ ಅಕ್ಬರ್ ಭಾನುವಾರ ಬೆಳಿಗ್ಗೆ ವಾಪಸಾಗಿದ್ದಾರೆ.

ಅಕ್ಬರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇವರು ಸಚಿವ ಸ್ಥಾನದಲ್ಲಿ ಮುಂದುವರಿಯುವ ಬಗ್ಗೆ ಯಾವ ಖಾತರಿಯೂ ಇಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ಈ ಹಿಂದೆ ತಿಳಿಸಿದ್ದವು.

ಪತ್ರಕರ್ತೆ ಪ್ರಿಯಾ ರಮಣಿಯಿಂದ ಶುರುವಾಗಿದ್ದ ಆರೋಪ...

ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ಬಗ್ಗೆ ಪತ್ರಕರ್ತೆ ಪ್ರಿಯಾ ರಮಣಿ ಅವರುವೋಗ್‌ ಇಂಡಿಯಾದಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲೇಖನವೊಂದನ್ನು ಬರೆದಿದ್ದರು. ಆದರೆ, ಅದರಲ್ಲಿ ಎಲ್ಲಿಯೂ ಅಕ್ಬರ್ ಹೆಸರನ್ನು ಉಲ್ಲೇಖಿಸಿರಲಿಲ್ಲ. ಇತ್ತೀಚೆಗೆ ಟ್ವೀಟ್ ಮಾಡಿದ್ದ ಅವರು,‘ಎಂಜೆ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ; ಯಾಕೆಂದರೆ ಅವರೇನೂ ‘ಮಾಡಿಲ್ಲ’. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರದನ್ನು ಹಂಚಿಕೊಳ್ಳಬಹುದು’ ಎಂದು ಬರೆದಿದ್ದರು. ಇದಾದ ನಂತರ ಹಲವು ಪತ್ರಕರ್ತೆಯರು ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಅಕ್ಬರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಅವರು, ಮೀ ಟೂ ಅಭಿಯಾನದ ಮೂಲಕ ಕೇಳಿ ಬಂದ ಲೈಂಗಿಕ ಕಿರುಕುಳದ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದ್ದೇವೆ ಎಂದು ಹೇಳಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.