
ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್, ಜೈರಾಮ್ ರಮೇಶ್
ನವದೆಹಲಿ: ‘ಮುಂದಿನ ವರ್ಷ ಮಿಯಾಮಿಯಲ್ಲಿ ನಡೆಯಲಿರುವ ಜಿ20 ಶೃಂಗದಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಆಫ್ರಿಕಾಗೆ ನಿರ್ಬಂಧ ಹೇರುವುದಾಗಿ ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಆಪ್ತ ಸ್ನೇಹಿತ’ ಎಂದು ಹೇಳುವ ‘ಸ್ವಯಂ ಘೋಷಿತ ಚಾಂಪಿಯನ್’ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿ ದಕ್ಷಿಣ ಆಫ್ರಿಕಾ ಹಿತ ಕಾಯುವರೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಜಾಗತಿಕ ಸಭೆಯಲ್ಲಿ ಅಮೆರಿಕದ ಪ್ರತಿನಿಧಿಗಳನ್ನು ನಡೆಸಿಕೊಂಡ ರೀತಿಗೆ ಪ್ರತೀಕಾರವಾಗಿ ಜಿ20 ಶೃಂಗದಿಂದ ಹೊರಗಿಡುವುದು, ದಕ್ಷಿಣ ಆಫ್ರಿಕಾಗೆ ನೀಡುತ್ತಿರುವ ಎಲ್ಲಾ ರೀತಿಯ ಆರ್ಥಿಕ ನೆರವು ಹಾಗೂ ಸಬ್ಸಿಡಿಗಳನ್ನು ನಿಲ್ಲಿಸುವುದಾಗಿ ಟ್ರಂಪ್ ಬೆದರಿಕೆಯೊಡ್ಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಅಮೆರಿಕ ನೆರವು ನೀಡುತ್ತಿದೆ ಎಂಬ ಕಾರಣಕ್ಕೆ ದಕ್ಷಿಣ ಆಫ್ರಿಕಾ ಜಿ20 ಶೃಂಗದಲ್ಲಿಲ್ಲ. ಬದಲಿಗೆ ಆಫ್ರಿಕಾ ಖಂಡದಲ್ಲೇ ಜಿಡಿಪಿ ಆಧಾರದಲ್ಲಿ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರ ದಕ್ಷಿಣ ಆಫ್ರಿಕಾ. ಈ ಆಧಾರದಲ್ಲಿ ಜಿ20ರ ಆರಂಭದಿಂದಲೂ ದಕ್ಷಿಣ ಆಫ್ರಿಕಾ ಈ ಶೃಂಗದಲ್ಲಿದೆ. ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲೂ. ಬುಷ್ ಅವರು ಅಧ್ಯಕ್ಷತೆ ವಹಿಸಿದ್ದ ಮೊದಲ ಶೃಂಗದಿಂದ ಹಿಡಿದು ಇಲ್ಲಿಯವರೆಗೂ ದಕ್ಷಿಣ ಆಫ್ರಿಕಾದ ಹಾಜರಿ ಮೌಲ್ಯಯುತವಾಗಿದೆ’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದ್ದಾರೆ.
‘ಭಾರತ ಮತ್ತು ದಕ್ಷಿಣ ಆಫ್ರಿಕಾ ವಿಶೇಷವಾದ ಸಂಬಂಧ ಹೊಂದಿದೆ ಎಂಬುದು ಮಾತ್ರವಲ್ಲ. ಬದಲಿಗೆ ಬ್ರಿಕ್ಸ್ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ ಹಾಗೂ ಚೀನಾ ಇರುವ ಗುಂಪಿನಲ್ಲೂ ದಕ್ಷಿಣ ಆಫ್ರಿಕಾ ಮಹತ್ವದ ಸ್ಥಾನ ಹೊಂದಿದೆ. ಬ್ರೆಜಿಲ್ ಜತೆಗಿನ IBSA ಮತ್ತು ಬ್ರೆಜಿಲ್, ಚೀನಾ ಜತೆಗಿರುವ BASICನಲ್ಲೂ ಈ ರಾಷ್ಟ್ರದ್ದು ಮಹತ್ವದ ಸ್ಥಾನ’ ಎಂದು ವಿವರಿಸಿದ್ದಾರೆ.
‘19ನೇ ಶತಮಾನದಲ್ಲಿ ಭಾರತದ ವಕೀಲರೊಬ್ಬರು ದಕ್ಷಿಣ ಆಫ್ರಿಕಾಗೆ ತೆರಳಿದ್ದರು. ಅವರು ಮರಳಿದಾಗ 20ನೇ ಶತಮಾನದಲ್ಲಿ ಭಾರತದಲ್ಲಿ ಸ್ವಾತಂತ್ರ್ಯದ ಕ್ರಾಂತಿ ಮೊಳಗಿತು’ ಎಂದು ಮಹಾತ್ಮಾ ಗಾಂಧಿ ಅವರನ್ನು ಜೈರಾಮ್ ರಮೇಶ್ ತಮ್ಮ ಪೋಸ್ಟ್‌ನಲ್ಲಿ ನೆನಪಿಸಿಕೊಂಡಿದ್ದಾರೆ.
‘ದಶಕಗಳಿಂದ ಭಾರತ ದಕ್ಷಿಣ ಆಫ್ರಿಕಾ ಜತೆಗಿದೆ. ವಸಾಹತುಶಾಹಿ ನಿರ್ಮೂಲನೆಯಿಂದ ಹಿಡಿದು ಎರಡೂ ರಾಷ್ಟ್ರಗಳು ಸಾಕಷ್ಟು ಹೋರಾಟಗಳನ್ನು ನಡೆಸಿವೆ. ನೆಲ್ಸನ್ ಮಂಡೇಲಾ ಅವರು ಭಾರತದಲ್ಲು ಅಷ್ಟೇ ಜನಪ್ರಿಯರು. ಹೀಗಿರುವಾಗ, ಆಫ್ರಿಕಾ ಮತ್ತು ಗ್ಲೋಬಲ್ ಸೌಥ್‌ನ ಸ್ವಯಂ ಘೋಷಿತ ಚಾಂಪಿಯನ್ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದಕ್ಷಿಣ ಆಫ್ರಿಕಾ ಹಿತ ಕಾಯುವ ಮೂಲಕ ಜಿ20 ರಾಷ್ಟ್ರದಲ್ಲಿ ಅದರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸುವರೇ’ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನಡೆದ ಜಾಗತಿಕ ಸಭೆಯಲ್ಲಿ, ಜಿ20 ಆಯೋಜನೆಯ ಹೊಣೆಯನ್ನು ಅಮೆರಿಕದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿಗೆ ವಹಿಸಲು ದಕ್ಷಿಣ ಆಫ್ರಿಕಾ ನಿರಾಕರಿಸಿದೆ ಎಂದು ರಿಪಬ್ಲಿಕನ್ ಪಕ್ಷದ ಮುಖಂಡ ಆರೋಪಿಸಿದ್ದರು. ಆಫ್ರಿಕಾ ಖಂಡದ ಬಿಳಿಯರು ಹಿಂಸಾತ್ಮಕ ಪ್ರವೃತ್ತಿ ಮೆರೆದಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು. ಫ್ಲೋರಿಡಾದ ಮಿಯಾಮಿಯಲ್ಲಿ 2026ರ ಜಿ20 ಶೃಂಗ ಸಭೆ ಆಯೋಜಿಸಲಾಗುವುದು. ಅಲ್ಲಿಗೆ ದಕ್ಷಿಣ ಆಫ್ರಿಕಾವನ್ನು ಆಹ್ವಾನಿಸುವುದಿಲ್ಲ ಎಂದು ಗುಡುಗಿದ್ದಾರೆ.
ಆದರೆ ಇವೆಲ್ಲವನ್ನೂ ದಕ್ಷಿಣ ಆಫ್ರಿಕಾ ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.