ಆತ್ಮಹತ್ಯೆ
Credit: iStock Photo
ಮುಂಬೈ: ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಪ್ರಿಯಕರ ನಿರಂತರವಾಗಿ ನಿಂದಿಸುತ್ತಿದ್ದಾನೆ ಎಂದು ಆರೋಪಿಸಿ ಏರ್ ಇಂಡಿಯಾ ಪೈಲಟ್ ಸೃಷ್ಟಿ ತುಲಿ (25) ಎಂಬುವರು ಡೇಟಾ ಕೇಬಲ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರೋಲ್ ಪ್ರದೇಶದ ಕನಕಿಯ ರೈನ್ ಫಾರೆಸ್ಟ್ ಕಟ್ಟಡದಲ್ಲಿ ವಾಸವಿದ್ದ ಯುವತಿ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಸಾವಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಿಯಕರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ನೀನು ಮಾಂಸಾಹಾರ ಸೇವಿಸುವುದನ್ನು ನಿಲ್ಲಿಸಬೇಕು’ ಎಂದು ಒತ್ತಾಯಿಸಿ ಗೆಳೆಯ ಆದಿತ್ಯ ಪಂಡಿತ್ (27) ಕಿರುಕುಳ ನೀಡಿದ್ದಾನೆ ಎಂದು ಸೃಷ್ಟಿ ತುಲಿ ಆರೋಪಿಸಿದ್ದಾರೆ. ಹಾಗಾಗಿ ಪ್ರಕರಣ ದಾಖಲಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
‘ತುಲಿ ಉತ್ತರ ಪ್ರದೇಶದವರಾಗಿದ್ದು, ಕೆಲಸದ ನಿಮಿತ್ತ ಕಳೆದ ವರ್ಷ ಜೂನ್‌ನಿಂದ ಮುಂಬೈಗೆ ಬಂದು ನೆಲೆಸಿದ್ದರು. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಕಮರ್ಷಿಯಲ್ ಪೈಲಟ್ ಕೋರ್ಸ್ ಓದುತ್ತಿದ್ದಾಗ ತುಲಿ ಮತ್ತು ಆದಿತ್ಯ ನಡುವೆ ಪರಿಚಯವಾಗಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಹಾರ ಕ್ರಮ ಬದಲಿಸಿಕೊಳ್ಳುವಂತೆ ಒತ್ತಡ ಹೇರಿ ಆದಿತ್ಯ ಆಗಾಗ್ಗೆ ಸಾರ್ವಜನಿಕವಾಗಿ ನಿಂದಿಸುವ ಮೂಲಕ ಕಿರುಕುಳ ನೀಡುತ್ತಿದ್ದಾನೆ ಎಂದು ತುಲಿ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಅವರ ಚಿಕ್ಕಪ್ಪ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತುಲಿ ಚಿಕ್ಕಪ್ಪ ನೀಡಿರುವ ದೂರು ಆಧರಿಸಿ ಪಂಡಿತ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.