ಏಕನಾಥ ಶಿಂದೆ ಮತ್ತು ಕುನಾಲ್ ಕಾಮ್ರಾ
ಮುಂಬೈ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾಗೆ ಪೊಲೀಸರು ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಮುಂಬೈನ ಖಾರ್ ಪ್ರದೇಶದ ಪೊಲೀಸರು ಕಾಮ್ರಾಗೆ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಕಾಮ್ರಾಗೆ ನೋಟಿಸ್ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಮ್ರಾ, ವಿಚಾರಣೆಗೆ ಹಾಜರಾಗಲು ಒಂದು ವಾರ ಕಾಲಾವಕಾಶ ಕೋರಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
36 ವರ್ಷದ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಈಚೆಗೆ ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂದೆ ಅವರನ್ನು ‘ವಂಚಕ’ ಎಂದು ಕರೆಯುವ ಮೂಲಕ ರಾಜಕೀಯ ವೃತ್ತಿಜೀವನವನ್ನು ಟೀಕಿಸಿದ್ದರು. ಇದು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿತ್ತು.
ಕಾಮ್ರಾ ಅವರ ಕಾರ್ಯಕ್ರಮ ನಡೆದಿದ್ದ ಸ್ಥಳದಲ್ಲಿ ದಾಂದಲೆ ನಡೆಸಿದ ಆರೋಪದ ಅಡಿ ಪೊಲೀಸರು ಶಿವಸೇನಾ ಪದಾಧಿಕಾರಿ ರಾಹುಲ್ ಕನಲ್ ಮತ್ತು 11 ಮಂದಿ ಇತರರನ್ನು ಬಂಧಿಸಿದ್ದಾರೆ. ದಾಂದಲೆ ನಡೆಸಿದವರ ಪೈಕಿ 15–20 ಮಂದಿಯನ್ನು ಗುರುತಿಸುವ ಕೆಲಸ ಇನ್ನೂ ಆಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.