ಮಾಲ್ಡಾ/ಮುಂಬೈ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆ ಹಾಗೂ ಮುಂಬೈನಲ್ಲಿ ಹಿಂದೂ ಮತ್ತು ಜೈನ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಶವಸಂಸ್ಕಾರ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದವರು ನೆರವಾಗಿದ್ದಾರೆ. ಎರಡೂ ಕಡೆ ಅಂತಿಮಯಾತ್ರೆ ವೇಳೆ ಮುಸ್ಲಿಮರು ‘ರಾಮ್ ನಾಮ್ ಸತ್ಯ ಹೇ’ ಎಂದು ಜಪಿಸಿ ಸೌಹಾರ್ದ ಮೆರೆದಿದ್ದಾರೆ.
ಮಾಲ್ಡಾದ ಲೊಯೈತೊಲಾದಲ್ಲಿ ಸುಮಾರು 100 ಮುಸ್ಲಿಂ ಕುಟುಂಬಗಳ ನಡುವೆ ವಾಸಿಸುತ್ತಿರುವ ಏಕೈಕ ಹಿಂದೂ ಕುಟುಂಬದ ಹಿರಿಯ ವಿನಯ್ ಸಾಹಾ (90) ವಯೋಸಹಜ ಅನಾರೋಗ್ಯದಿಂದ ಮೃತಪಟ್ಟರು. ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಅಂತ್ಯಸಂಸ್ಕಾರ ನಡೆಸುವುದು ಹೇಗೆಂದು ಅವರ ಇಬ್ಬರು ಪುತ್ರರಾದ ಕಮಲ್–ಶ್ಯಾಮಲ್ ಚಿಂತೆಗೊಳಗಾದರು.ಆದರೆ ನೆರೆಮನೆಯ ಸದ್ದಾಂ ಶೇಖ್ ಅವರಿಂದಲೇ ಹಿಂದೂ ಕುಟುಂಬಕ್ಕೆ ನೆರವಿನ ಹಸ್ತ ಒದಗಿಬಂದಿತು.
‘ಮಂಗಳವಾರ ಸಾಹಾ ಅವರು ಮೃತಪಟ್ಟರೆಂದು ಮೊದಲು ತಿಳಿದಿದ್ದೇ ನನಗೆ. ನೆರೆಮನೆಯವರಾಗಿ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಮಾನವೀ
ಯತೆಗಿಂತ ಯಾವ ಧರ್ಮವೂ ಶ್ರೇಷ್ಠವಲ್ಲ’ ಎಂದು ಶೇಖ್ ಹೇಳಿದ್ದಾರೆ.
‘ನಮ್ಮ ಸಂಬಂಧಿಕರಿಗೆ ಈ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ನಾವು ಚಿಂತಿಸುವ ಅಗತ್ಯವೇ ಇರಲಿಲ್ಲ. ನೆರೆಮನೆಯವರ ಸಹಾಯದಿಂದ ಎಲ್ಲ ಕಾರ್ಯಗಳೂ ಸರಾಗವಾಗಿ ಆದವು’ ಎಂದು ಶ್ಯಾಮಲ್ ಪ್ರತಿಕ್ರಿಯಿಸಿದ್ದಾರೆ.
‘ನಮ್ಮ ನಂಬಿಕೆಗಳೇನೇ ಇದ್ದರೂ ಅದರ ಹೊರತಾಗಿ ಎಲ್ಲರೂ ಒಟ್ಟಾಗಿ ಜೀವಿಸುತ್ತೇವೆ’ ಎಂದು ಪಂಚಾಯ್ತಿ ಮುಖ್ಯಸ್ಥೆ ಆಗಿರುವ ರಝಿಯಾ ಬೀಬಿ ಹೇಳಿದ್ದಾರೆ.
ಮುಂಬೈನಲ್ಲೂ ನೆರವು: ಮುಂಬೈನ ಬಾಂದ್ರಾದ ಗರೀಬ್ ನಗರದಲ್ಲಿ ವಾಸವಿದ್ದ ಪ್ರೇಮಚಂದ್ರ ಬುದ್ಧಲಾಲ್ ಮಹಾವೀರ್ (68) ಸಹ ಲಾಕ್‌ಡೌನ್ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಇದರಿಂದಾಗಿ ಅವರ ಸಂಬಂಧಿಕರಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ನಾಲಾಸೋಪಾರಾದಲ್ಲಿ ವಾಸವಿರುವ ತನ್ನ ಇಬ್ಬರು ಅಣ್ಣಂದಿರನ್ನು ಸಂಪರ್ಕಿಸಲೂ ಆಗದೆ, ಪ್ರೇಮಚಂದ್ರ ಅವರ ಪುತ್ರ ಮೋಹನ್ ಹತಾಶರಾಗಿದ್ದರು. ಈ ವೇಳೆಯಲ್ಲಿ ಮೋಹನ್ ನೆರವಿಗೆ ಅಕ್ಕಪಕ್ಕದ ಮುಸ್ಲಿಮರು ಒದಗಿಬಂದಿದ್ದಾರೆ. ಪ್ರೇಮಚಂದ್ರ ಅವರ ಶವವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಷ್ಟೇ ಅಲ್ಲದೆ, ಮರಣಪ್ರಮಾಣ ಪತ್ರ ಪಡೆದುಕೊಳ್ಳಲೂ ಸಹಾಯ ಮಾಡಿದ್ದಾರೆ.
‘ಇಂತಹ ಸಮಯದಲ್ಲಿ, ನಾವು ಧಾರ್ಮಿಕ ಅಡೆತಡೆಗಳನ್ನು ಮೀರಿ ಮಾನವೀಯತೆ ತೋರಿಸಬೇಕು’ ಎಂದು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಯೂಸುಫ್ ಸಿದ್ದಿಕಿ ಶೇಖ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.