ADVERTISEMENT

ಮೀರತ್‌ನಲ್ಲಿ ಆತಂಕ ಸೃಷ್ಟಿಸಿದ 'ಬೆತ್ತಲೆ ಗ್ಯಾಂಗ್': ಮಹಿಳೆಯರ ಮೇಲೆ ದಾಳಿ, ಹಲ್ಲೆ

ಸಂಜಯ ಪಾಂಡೆ
Published 6 ಸೆಪ್ಟೆಂಬರ್ 2025, 14:04 IST
Last Updated 6 ಸೆಪ್ಟೆಂಬರ್ 2025, 14:04 IST
   

ಲಖನೌ: ಮೈಮೇಲೆ ತುಂಡು ಬಟ್ಟೆಯನ್ನೂ ಧರಿಸದೆ ಹೊಲಗಳಿಂದ ಏಕಾಏಕಿ ನುಗ್ಗುವ ಗುಂಪೊಂದು ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ಯಲು ಹಾಗೂ ಹಲ್ಲೆ ಮಾಡಲು ಪ್ರಯತ್ನಿಸಿದ ಪ್ರಕರಣಗಳು ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯಲ್ಲಿ ವರದಿಯಾಗಿವೆ.

ಜಿಲ್ಲೆಯ ದೌರಲಾ ಗ್ರಾಮದಲ್ಲಿ 'ಬೆತ್ತಲೆ ಗ್ಯಾಂಗ್‌' ಬಗ್ಗೆ ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲ ದಿನಗಳ ಅಂತರದಲ್ಲಿ ನಾಲ್ಕು ಬಾರಿ ಇಂತಹ ಘಟನೆಗಳು ನಡೆದಿವೆ ಎಂದು ಸ್ಥಳೀಯರು ಹೇಳಿದ್ದಾರೆ.

'ಉದ್ದ ಕೂದಲಿನ ಯುವಕರು, ಬೆಳೆಗಳ ಮಧ್ಯದಿಂದ ನಗ್ನವಾಗಿ ಏಕಾಏಕಿ ನುಗ್ಗುತ್ತಾರೆ. ಆಸುಪಾಸಿನಲ್ಲಿ ಹಾದುಹೋಗುವ ಮಹಿಳೆಯರ ಮೇಲೆ ದಾಳಿ ಮಾಡುತ್ತಾರೆ. ಅವರನ್ನು ಹೊಲಗಳಿಗೆ ಎಳೆದೊಯ್ದು ಹಲ್ಲೆ ಮಾಡಲು ಪ್ರಯತ್ನಿಸುತ್ತಾರೆ' ಎಂದು ದೌರಲಾ ಗ್ರಾಮದ ವ್ಯಕ್ತಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

'ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರ ಮೇಲೆ ಎರಡು ದಿನಗಳ ಹಿಂದಷ್ಟೇ ಭರಾಲ ಗ್ರಾಮದ ಸಮೀಪ ಇಬ್ಬರು ಯುವಕರು ದಾಳಿ ಮಾಡಿದ್ದರು. ಆದರೆ, ಧೈರ್ಯದಿಂದ ಪ್ರತಿರೋಧ ಒಡ್ಡಿದ್ದ ಮಹಿಳೆ, ನೆರವಿಗಾಗಿ ಜೋರಾಗಿ ಕೂಗಿಕೊಂಡಿದ್ದರು. ಅಕ್ಕಪಕ್ಕ ಇದ್ದ ನಿವಾಸಿಗಳು ಅಲ್ಲಿಗೆ ಬರುವಷ್ಟರಲ್ಲಿ ಆಗಂತುಕರು ಪರಾರಿಯಾಗಿದ್ದರು' ಎಂದೂ ಹೇಳಿದ್ದಾರೆ.

ಇದು ನಾಲ್ಕನೇ ಪ್ರಕರಣ ಎಂದಿರುವ ಗ್ರಾಮಸ್ಥರು, ಇದೊಂದು ಅವಮಾನಕರ ಸಂಗತಿ ಎಂಬ ಕಾರಣಕ್ಕೆ ಬಹಿರಂಗಪಡಿಸಿರಲಿಲ್ಲ ಎಂದಿದ್ದಾರೆ.

ಮಹಿಳೆಯರು ಮನೆಗಳಿಂದ ಹೊರಗೆ ಹೋಗುವುದನ್ನು ಕಡಿಮೆ ಮಾಡಿದ್ದಾರೆ ಎಂದಿರುವ ಭರಾಲ ಗ್ರಾಮದ ಮುಖಂಡ ರಾಜೇಂದ್ರ ಕುಮಾರ್‌, 'ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದಾರೆ' ಎಂದು ತಿಳಿಸಿದ್ದಾರೆ.

ವರದಿಗಳ ಪ್ರಕಾರ, ಘಟನೆಗಳು ನಡೆದಿರುವ ಗ್ರಾಮ ಹಾಗೂ ಅಕ್ಕಪಕ್ಕದ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕಣ್ಗಾವಲಿಗೆ ಡ್ರೋನ್‌ಗಳನ್ನೂ ಬಳಸುತ್ತಿದ್ದಾರೆ. ಆದಾಗ್ಯೂ, 'ಬೆತ್ತಲೆ ಗ್ಯಾಂಗ್‌' ಸದಸ್ಯರ ಸುಳಿವು ಸಿಕ್ಕಿಲ್ಲ. ಗ್ರಾಮದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಮತ್ತು ಕಿಡಿಗೇಡಿಗಳನ್ನು ಬಂಧಿಸುವ ಸಲುವಾಗಿ ಗ್ರಾಮದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.

ಇದರ ಹಿಂದೆ, ಯಾವುದೇ ಗುಂಪು (ಬೆತ್ತಲೆ ಗ್ಯಾಂಗ್‌) ಇದ್ದಂತಿಲ್ಲ. ಪೊಲೀಸರು ಮತ್ತು ಸ್ಥಳೀಯ ಆಡಳಿತದ ಹೆಸರು ಕೆಡಿಸಲು ಸಮಾಜ ವಿರೋಧಿ ಶಕ್ತಿಗಳ ಕೈವಾಡವಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.