ಏರ್ ಇಂಡಿಯಾ ಮತ್ತು ಇಂಡಿಗೊ ವಿಮಾನಗಳು
–ರಾಯಿಟರ್ಸ್ ಚಿತ್ರಗಳು
ನವದೆಹಲಿ: ಭಾರತೀಯ ವಿಮಾನಯಾನ ಸಂಸ್ಥೆಗಳು ಇಂದಿನಿಂದಲೇ (ಗುರುವಾರ) ನೇಪಾಳ ರಾಜಧಾನಿ ಕಠ್ಮಂಡುವಿಗೆ ಸೇವೆಗಳನ್ನು ಪುನರಾರಂಭಿಸಿವೆ ಎಂದು ವರದಿಯಾಗಿದೆ.
‘ಹಿಂಸಾಚಾರದಿಂದಾಗಿ ನೇಪಾಳದಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಏರ್ ಇಂಡಿಯಾ ಮತ್ತು ಇಂಡಿಗೊ ಸಂಸ್ಥೆಗಳು ಹೆಚ್ಚುವರಿ ವಿಮಾನ ಸೇವೆ ಒದಗಿಸುತ್ತಿವೆ’ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.
‘ಪ್ರಯಾಣಿಕರಿಂದ ಹೆಚ್ಚುವರಿ ದರ ಪಡೆಯದಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದೂ ನಾಯ್ಡು ಹೇಳಿದ್ದಾರೆ.
ಕಠ್ಮಂಡು ಸೇರಿದಂತೆ ಹಲವೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ತ್ರಿಭುವನ್ ಅಂತರರಾಷ್ಟ್ರೀಯ ವಿಮಾನವನ್ನು ಬಂದ್ ಮಾಡಲಾಗಿತ್ತು. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದ್ದು, ವಿಮಾನ ನಿಲ್ದಾಣವು ಮತ್ತೆ ಕಾರ್ಯಾರಂಭಿಸಿದೆ.
‘ನೇಪಾಳದಲ್ಲಿ ಸಿಲುಕಿಕೊಂಡಿರುವ ಪ್ರಯಾಣಿಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಂದು ಮತ್ತು ನಾಳೆ ದೆಹಲಿಯಿಂದ ಕಠ್ಮಂಡುವಿಗೆ ತೆರಳಲು ಮತ್ತು ಹಿಂತಿರುಗಲು ವಿಶೇಷ ವಿಮಾನಗಳು ಕಾರ್ಯ ನಿರ್ವಹಿಸಲಿವೆ’ ಎಂದು ಏರ್ ಇಂಡಿಯಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ.
ನವದೆಹಲಿ ಮತ್ತು ಕಠ್ಮಂಡು ನಡುವೆ ಪ್ರತಿದಿನ 12 ವಿಮಾನಗಳನ್ನು ನಿರ್ವಹಿಸುವ ಏರ್ ಇಂಡಿಯಾ, ಮಂಗಳವಾರ ನಾಲ್ಕು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತ್ತು. ಜತೆಗೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಇಂಡಿಗೊ, ಸ್ಪೈಸ್‌ಜೆಟ್ ಸೇರಿದಂತೆ ನೇಪಾಳ ಏರ್‌ಲೈನ್ಸ್ ಸಂಸ್ಥೆಗಳು ಕೂಡ ವಿಮಾನ ಹಾರಾಟವನ್ನು ರದ್ದುಗೊಳಿಸಿದ್ದವು.
ಘರ್ಷಣೆಯನ್ನು ಹತ್ತಿಕ್ಕುವ ಸಲುವಾಗಿ ನೇಪಾಳ ಸೇನೆಯು ರಾಷ್ಟ್ರದಾದ್ಯಂತ ನಿರ್ಬಂಧ ಆದೇಶ ಮತ್ತು ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ.
ಕೆ.ಪಿ ಶರ್ಮಾ ಓಲಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಸೇನೆಯು ನಿರ್ಬಂಧಗಳನ್ನು ವಿಧಿಸುವ ಮೂಲಕ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಈ ನಡುವೆ, ದೇಶದಲ್ಲಿ ಮಧ್ಯಂತರ ಸರ್ಕಾರ ರಚಿಸುವ ಕುರಿತ ಪ್ರಯತ್ನಗಳಿಗೂ ಚಾಲನೆ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.