ADVERTISEMENT

ಸೊಳ್ಳೆ ನಿಯಂತ್ರಣಕ್ಕೆ ಗಂಬೂಸಿಯಾ, ಗಪ್ಪಿ: ಕೇಂದ್ರಕ್ಕೆ ಎನ್‌ಜಿಟಿ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2025, 15:57 IST
Last Updated 2 ಫೆಬ್ರುವರಿ 2025, 15:57 IST
<div class="paragraphs"><p>&nbsp;ಎನ್‌ಜಿಟಿ&nbsp;&nbsp;</p></div>

 ಎನ್‌ಜಿಟಿ  

   

ನವದೆಹಲಿ: ದೇಶದ ವಿವಿಧೆಡೆ ಸೊಳ್ಳೆಗಳ ನಿಯಂತ್ರಣಕ್ಕೆ ಜಲಮೂಲಗಳಲ್ಲಿ ಬಿಡುಗಡೆ ಮಾಡುತ್ತಿರುವ ‘ಗಂಬೂಸಿಯಾ ಅಫಿನಿಸ್‌’ ಮತ್ತು ‘ಪೊಸಿಲಿಯಾ ರೆಟಿಕ್ಯುಲಾಟಾ’ (ಗಪ್ಪಿ) ಜಾತಿಯ ಮೀನುಗಳ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನೋಟಿಸ್‌ ಜಾರಿಗೊಳಿಸಿದೆ.

ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಸ್ತಾವ ಅವರ ನೇತೃತ್ವದ ಎನ್‌ಜಿಟಿ ಪ್ರಧಾನ ಪೀಠ ಕೇಂದ್ರಕ್ಕೆ ನೋಟಿಸ್‌ ನೀಡಿದೆ.

ADVERTISEMENT

ಕರ್ನಾಟಕ, ಅಸ್ಸಾಂ, ಅರುಣಾಚಲ ಪ್ರದೇಶ, ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಒಡಿಶಾ, ಪಂಜಾಬ್‌ ಮತ್ತು ಆಂಧ್ರ ಪ್ರದೇಶಗಳಲ್ಲಿ ಕೆರೆ, ಕಟ್ಟೆ ಮತ್ತಿತರ ಜಲ ಮೂಲಗಳಲ್ಲಿ ಸೊಳ್ಳೆ ನಿಯಂತ್ರಿಸಲು ‘ಗಂಬೂಸಿಯಾ ಅಫಿನಿಸ್‌’ ಮೀನನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್‌ ಮತ್ತು ಒಡಿಶಾ ರಾಜ್ಯಗಳಲ್ಲಿ ‘ಗಪ್ಪಿ’ ಜಾತಿಯ ಮೀನನ್ನು ಬಿಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಆಕ್ರಮಣಕಾರಿ ಪ್ರಭೇದಗಳ ಕುರಿತು ಅಧ್ಯಯನ ನಡೆಸುವ ತಜ್ಞರ ಗುಂಪಿನ (ಐಎಸ್‌ಎಸ್‌ಜಿ) ವರದಿಯ ಪ್ರಕಾರ, ಈ ಮೀನುಗಳು ವಿಶ್ವದ 100 ಅತಿ ಅಕ್ರಮಣಕಾರಿ ಜಾತಿಗಳ ಪಟ್ಟಿಯಲ್ಲಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಷ್ಟ್ಟೀಯ ಜೀವವೈವಿಧ್ಯ ಪ್ರಾಧಿಕಾರವು ಈ ಎರಡೂ ಪ್ರಭೇದದ ಮೀನುಗಳನ್ನು ಆಕ್ರಮಣಕಾರಿ ಎಂದು ಘೋಷಿಸಿದೆ. ಅವುಗಳಿಂದ ಸ್ಥಳೀಯ ಮೀನು ಪ್ರಭೇದಗಳಿಗೆ ಆಹಾರದ ಕೊರೆತೆ ಉಂಟಾಗಿ, ಜಲಚರ ಪರಿಸರ ವ್ಯವಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ದೇಶಗಳಲ್ಲಿ ಈ ಸೊಳ್ಳೆ ನಿಯಂತ್ರಣ ಮೀನುಗಳ ಮೇಲೆ ನಿಷೇಧ ಹೇರಲಾಗಿದೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಅರ್ಜಿ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆ ಎನ್‌ಜಿಟಿಯು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರ ಮತ್ತು ಆಶ್ರಿತ ರೋಗಗಳ ರಾಷ್ಟ್ರೀಯ ನಿಯಂತ್ರಣ ಕೇಂದ್ರಕ್ಕೆ ಸೂಚಿಸಿ, ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.