ADVERTISEMENT

'ಆಪರೇಷನ್ ಸಿಂಧೂರ' ಬತ್ತಳಿಕೆಯ ಒಂದು ಬಾಣವಷ್ಟೇ, ಸಮರ ಮುಗಿದಿಲ್ಲ: ಮೋದಿ

ಪಿಟಿಐ
Published 30 ಮೇ 2025, 11:14 IST
Last Updated 30 ಮೇ 2025, 11:14 IST
<div class="paragraphs"><p>ಬಿಹಾರದಲ್ಲಿ ಮೋದಿ ಮಾತು</p></div>

ಬಿಹಾರದಲ್ಲಿ ಮೋದಿ ಮಾತು

   

ಪಿಟಿಐ ಚಿತ್ರ 

ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯ ವಿರುದ್ಧ ಸಮರ ಸಾರಿದ್ದು, ಆಪರೇಷನ್‌ ಸಿಂಧೂರ ಭಾರತದ ಬತ್ತಳಿಕೆಯಲ್ಲಿರುವ ಬಾಣವಷ್ಟೇ. ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ಮುಗಿದಿಲ್ಲ ಅಥವಾ ನಿಂತಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ADVERTISEMENT

ಮುಂಬರುವ ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿ, ರೋಹ್ತಾಸ್ ಜಿಲ್ಲೆಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಮಧುಬನಿ ಜಿಲ್ಲೆಯಲ್ಲಿ ಕಳೆದ ತಿಂಗಳು ನಡೆದಿದ್ದ ರ‍್ಯಾಲಿ ಉಲ್ಲೇಖಿಸಿದ ಅವರು, ‘ಪಹಲ್ಗಾಮ್‌ ದಾಳಿ ಕೃತ್ಯದ ಮಾರನೇ ದಿನ ನಾನು ಬಿಹಾರಕ್ಕೆ ಭೇಟಿ ನೀಡಿದ್ದೆ. ಆಗ, ಸಂಚುಕೋರರು ಕನಸಿನಲ್ಲೂ ಎಣಿಸದಂತೆ ದಂಡಿಸಲಿದ್ದೇವೆ ಎಂದು ಹೇಳಿದ್ದೆ. ಈಗ, ಇಲ್ಲಿ ನಿಂತು ಮತ್ತೆ ಹೇಳುತ್ತಿದ್ದೇನೆ. ಅಂದು ನೀಡಿದ್ದ ಭರವಸೆಯನ್ನು ನಾವು ಈಡೇರಿಸಿದ್ದೇವೆ’ ಎಂದರು.

ಭಯೋತ್ಪಾದನೆ ಪಿಡುಗನ್ನು ವಿಷಸರ್ಪಕ್ಕೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಉಗ್ರರು ಮತ್ತೆ ಬಾಲಬಿಚ್ಚಿದಲ್ಲಿ, ಅಡಗುತಾಣದಿಂದ ಹೊರಗೆಳೆದು ಅವರನ್ನು ಹೊಸಕಿ ಹಾಕುತ್ತೇವೆ’ ಆಪರೇಷನ್‌ ಸಿಂಧೂರ ಭಾರತದ ಬತ್ತಳಿಕೆಯಲ್ಲಿರುವ ಬಾಣವಷ್ಟೇ. ಭಯೋತ್ಪಾದನೆಯ ವಿರುದ್ಧದ ಸಮರ ಮುಗಿದಿಲ್ಲ ಅಥವಾ ನಿಂತಿಲ್ಲ' ಎಂದು ಮೋದಿ ತಿಳಿಸಿದ್ದಾರೆ.

‘ಸಿಂಧೂರ’ ಕಾರ್ಯಾಚರಣೆ ವೇಳೆ ದೇಸಿ ತಯಾರಿಕೆಯ ‘ಬ್ರಹ್ಮೋಸ್‌’ ಕ್ಷಿಪಣಿ ಸಾಮರ್ಥ್ಯವನ್ನು ಪಾಕಿಸ್ತಾನ, ಇಡೀ ಜಗತ್ತು ನೋಡಿದೆ. ಪಾಕ್‌ ಸೇನೆ ಆಶ್ರಯದಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಉಗ್ರರು ಭಾವಿಸಿದ್ದರು. ಆದರೆ, ಅವರು ಮಂಡಿ ಊರುವಂತೆ ಮಾಡಿದ್ದೇವೆ. ಪಾಕಿಸ್ತಾನದ ವಾಯುನೆಲೆ, ಸೇನಾ ಸೌಲಭ್ಯಗಳನ್ನೂ ನಾಶಪಡಿಸಿದ್ದೇವೆ. ಇದು, ನವಭಾರತ ಮತ್ತು ಅದರ ಸಾಮರ್ಥ್ಯ’ ಎಂದು ಪ್ರತಿಪಾದಿಸಿದರು.

'ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಪಕ್ಷವು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗೆ ವಂಚಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದ್ದು, ಆದರೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಬಿಹಾರವಿಲ್ಲದೆ ವಿಕ್ಷಿತ ಭಾರತವನ್ನು ಊಹಿಸಲು ಸಾಧ್ಯವಿಲ್ಲ' ಎಂದು ತಿಳಿಸಿದ್ದಾರೆ.

2014ರ ಬಳಿಕ ಎನ್‌ಡಿಎ ಸರ್ಕಾರ ನಕ್ಸಲ ಪಿಡುಗಿನ ವಿರುದ್ಧ ತೀವ್ರ ಹೋರಾಟ ನಡೆಸಿದೆ. ಇದರ ಪರಿಣಾಮ ನಕ್ಸಲ್ ಬಾಧಿತ ಜಿಲ್ಲೆಗಳ ಸಂಖ್ಯೆ 125ರಿಂದ 18ಕ್ಕೆ ಇಳಿದಿದೆ. ನಕ್ಸಲರ ನಿರ್ಮೂಲನ ಮತ್ತು ಅಲ್ಲಿ ಶಾಂತಿ, ಪ್ರಗತಿ ಕಾಣುವ ದಿನಗಳು ದೂರವಿಲ್ಲ ಎಂದರು. 

ಉಗ್ರರ 118 ನೆಲೆಗಳ ನಾಶ: ಅಮಿತ್ ಶಾ

ಪೂಂಛ್: ಜಮ್ಮು ಗಡಿಗೆ ಹೊಂದಿಕೊಂಡಂತೆ ಇದ್ದ ಸುಮಾರು 118 ಉಗ್ರರ ನೆಲೆಗಳನ್ನು ಭಾರತೀಯ ಸೇನೆಯು ಇತ್ತೀಚೆಗೆ ನಡೆದ ದಾಳಿ ಅವಧಿಯಲ್ಲಿ ನಾಶಪಡಿಸಿದೆ ಮತ್ತು ತೀವ್ರ ಜಖಂಗೊಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದರು. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಬಳಿಕ ಇದೇ ಮೊದಲಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಅವರು ಬಿಎಸ್‌ಎಫ್‌ ಕಾರ್ಯವೈಖರಿಯನ್ನು ಮುಕ್ತವಾಗಿ ಶ್ಲಾಘಿಸಿದರು. ಬಿಎಸ್‌ಎಫ್‌ ವೈರಿಗಳ ಗುಪ್ತದಳ ಜಾಲವನ್ನು ಪೂರ್ಣ ನಾಶಪಡಿಸಿದೆ. ಇದನ್ನು ಸರಿಪಡಿಸಿಕೊಳ್ಳಲು 4–5 ವರ್ಷಗಳೇ ಬೇಕಾಗುತ್ತದೆ ಎಂದರು. ಎರಡು ದಿನದ ಭೇಟಿ ವೇಳೆ ಅವರು ಭದ್ರತಾ ವ್ಯವಸ್ಥೆ ಹಾಗೂ ಅಮರನಾಥ ಯಾತ್ರೆಯ ಸಿದ್ಧತೆಗಳನ್ನು ಪರಿಶೀಲಿಸಿದರು. ಪಾಕ್‌ ಸೇನೆಯ ಶೆಲ್‌ ದಾಳಿಯಿಂದ ಸಮಸ್ಯೆಗೆ ಗುರಿ ಆದವರನ್ನು ಭೇಟಿಯಾಗಿ ಚರ್ಚಿಸಿದರು.  ಬಿಎಸ್‌ಎಫ್‌ ಮುಂಚೂಣಿ ರಕ್ಷಣಾ ವ್ಯವಸ್ಥೆಯಾಗಿ ಮರುಭೂಮಿ ಬೆಟ್ಟ ಪ್ರದೇಶ ಅರಣ್ಯಗಳಲ್ಲಿ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್‌ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.

ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್‌. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.