ನರೇಂದ್ರ ಮೋದಿ
ಕೋಲ್ಕತ್ತ: ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ. ನೆರೆಯ ಪಾಕಿಸ್ತಾನದ ಭೂಪ್ರದೇಶದೊಳಗೆ ನುಗ್ಗಿ ನಾವು ಈಗಾಗಲೇ ಮೂರು ಬಾರಿ ದಾಳಿ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಅಲಿಪುರ್ದೂರ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಮಹಿಳೆಯರ ಘನತೆಯನ್ನು ಅವಮಾನಿಸಿದ ಉಗ್ರರ ಕೃತ್ಯಕ್ಕೆ ನಮ್ಮ ಸಶಸ್ತ್ರ ಪಡೆಗಳು ಪ್ರತೀಕಾರ ತೀರಿಸಿಕೊಂಡಿವೆ. ಭಯೋತ್ಪಾದನೆಯನ್ನು ಪೋಷಿಸುವವರ ವಿರುದ್ಧ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಎಚ್ಚರಿಸಿದ್ದಾರೆ.
ನಾನು ಇಲ್ಲಿಂದಲೇ ನಿಂತು... 140 ಕೋಟಿ ಭಾರತೀಯರ ಪರವಾಗಿ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಇನ್ನೂ ಮುಗಿದಿಲ್ಲ ಎಂದು ಘೋಷಣೆ ಮಾಡುತ್ತಿದ್ದೇನೆ ಎಂದು ಮೋದಿ ಗುಡುಗಿದ್ದಾರೆ.
ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಅನಾಗರಿಕ ಕೃತ್ಯದ ನಂತರ ಪಶ್ಚಿಮ ಬಂಗಾಳದಲ್ಲಿಯೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ನಿಮ್ಮೊಳಗಿನ ಕೋಪವನ್ನು ನಾನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇನೆ. ಉಗ್ರರು ನಮ್ಮ ಸಹೋದರಿಯರ ಸಿಂಧೂರವನ್ನು ಅಳಿಸುವ ಧೈರ್ಯ ತೋರಿದ್ದರು. ಆದರೆ, ನಮ್ಮ ಸಶಸ್ತ್ರ ಪಡೆಗಳು ಉಗ್ರರಿಗೆ ‘ಸಿಂಧೂರ’ದ ಶಕ್ತಿಯನ್ನು ಅರಿತುಕೊಳ್ಳುವಂತೆ ಮಾಡಿವೆ ಎಂದು ಮೋದಿ ಹೇಳಿದ್ದಾರೆ.
‘ಭಯೋತ್ಪಾದನೆಯ ಬಗ್ಗೆ ಭಾರತ ಶೂನ್ಯ ಸಹಿಷ್ಣುತೆ ನೀತಿಯನ್ನು ಅಳವಡಿಸಿಕೊಂಡಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ‘ಪಹಲ್ಗಾಮ್ ದಾಳಿ ಬಳಿಕ ಭಾರತದ ಮೇಲೆ ಉಗ್ರರು ದಾಳಿ ನಡೆದರೆ, ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಜಗತ್ತಿಗೆ ನಾವು ಈಗಾಗಲೇ ಸಾಬೀತುಪಡಿಸಿದ್ದೇವೆ’ ಎಂದಿದ್ದಾರೆ.
ನಾವು ಪಾಕಿಸ್ತಾನ ಎಂದಿಗೂ ಯೋಚಿಸದ ಗಡಿಯಾಚೆಗಿನ ಭಯೋತ್ಪಾದನಾ ಮೂಲಸೌಕರ್ಯವನ್ನು ನಾಶಪಡಿಸಿದ್ದೇವೆ. ನಮ್ಮ ಸಶಸ್ತ್ರ ಪಡೆಗಳು ನಿಮ್ಮ (ಪಾಕಿಸ್ತಾನ) ಭೂಪ್ರದೇಶದೊಳಗೆ ನುಗ್ಗಿ ಮೂರು ಬಾರಿ ದಾಳಿ ಮಾಡಿದ್ದೇವೆ (2016ರ ಸರ್ಜಿಕಲ್ ಸ್ಟ್ರೈಕ್, 2019ರ ಬಾಲಕೋಟ್ ವಾಯುದಾಳಿ ಮತ್ತು 2025ರ ಆಪರೇಷನ್ ಸಿಂಧೂರ) ಎಂಬುದನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಮೋದಿ ಗುಡುಗಿದ್ದಾರೆ.
ಭಯೋತ್ಪಾದನೆ ಮತ್ತು ಸಾಮೂಹಿಕ ಹತ್ಯೆ ಪಾಕ್ ಸೇನೆಯ ಅತಿದೊಡ್ಡ ಪರಿಣತಿಯಾಗಿದೆ. ಯುದ್ಧ ನಡೆದಾಗಲೆಲ್ಲಾ ಅವರು ಸೋಲನ್ನು ಎದುರಿಸುತ್ತಾರೆ ಎಂದೂ ಅವರು ಕುಟುಕಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.