ADVERTISEMENT

ಆಪರೇಷನ್ ಸಿಂಧೂರ | ಕೇಂದ್ರ ಸರ್ಕಾರ, ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ RSS

ಪಿಟಿಐ
Published 9 ಮೇ 2025, 8:03 IST
Last Updated 9 ಮೇ 2025, 8:03 IST
ಮೋಹನ್‌ ಭಾಗವತ್
ಮೋಹನ್‌ ಭಾಗವತ್   

ನವದೆಹಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿದ್ದಕ್ಕಾಗಿ ಕೇಂದ್ರ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಪಹಲ್ಗಾಮ್ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಸ್ಥರಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸಲು ತೆಗೆದುಕೊಳ್ಳಲಾದ ಈ ಕ್ರಮವು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದು ಭಾಗವತ್ ತಿಳಿಸಿದ್ದಾರೆ

ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ತೆಗೆದುಕೊಳ್ಳುತ್ತಿರುವ ಮಿಲಿಟರಿ ಕ್ರಮವು ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಹೆಜ್ಜೆಯಾಗಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ಇಡೀ ದೇಶವು ಸರ್ಕಾರ ಮತ್ತು ಸಶಸ್ತ್ರ ಪಡೆಗಳೊಂದಿಗೆ ಮುಕ್ತ ಮನಸ್ಸಿನಿಂದ ನಿಂತಿದೆ ಎಂದು ಭಾಗವತ್ ಹೇಳಿದ್ದಾರೆ.

ADVERTISEMENT

ಭಾರತದ ಗಡಿಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ನಾಗರಿಕ ಮನೆಗಳ ಮೇಲೆ ಪಾಕ್‌ ಸೇನೆ ನಡೆಸಿದ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಈ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರ ಹೊರಡಿಸುವ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸಬೇಕು. ಎಲ್ಲಾ ನಾಗರಿಕರು ತಮ್ಮ ದೇಶಭಕ್ತಿಯನ್ನು ಪ್ರದರ್ಶಿಸಲು ಮತ್ತು ಅಗತ್ಯವಿರುವಲ್ಲಿ ಸೈನ್ಯ ಮತ್ತು ಆಡಳಿತದೊಂದಿಗೆ ಸಹಕರಿಸಲು ಸಿದ್ಧರಾಗಿರಬೇಕು ಎಂದು ಭಾಗವತ್ ಮನವಿ ಮಾಡಿದ್ದಾರೆ.

ಸರ್ಕಾರ, ಸೇನೆಗೆ ಬೆಂಬಲ ನೀಡಲು ಬಿಎಂಎಸ್‌ ಕರೆ

ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ (ಆರ್‌ಎಸ್‌ಎಸ್‌) ಅಂಗಸಂಸ್ಥೆಯಾಗಿರುವ ಭಾರತೀಯ ಮಜ್ದೂರ್‌ ಸಂಘ (ಬಿಎಂಎಸ್‌) ಎಲ್ಲ ರೀತಿಯ ಮುಷ್ಕರಗಳು, ಆಂದೋಲನಗಳನ್ನು ಮುಂದೂಡಲು ಹಾಗೂ ಸರ್ಕಾರ ಮತ್ತು ಸಶಸ್ತ್ರ ಪಡೆಗೆ ನೆರವು ನೀಡಲು ಕರೆ ನೀಡಿದೆ. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಅತಿ ಅಗತ್ಯವಿದ್ದರೆ ಮಾತ್ರ ರಜಾ ತೆಗೆದುಕೊಳ್ಳಿ, ಈಗಾಗಲೇ ರಜೆಯಲ್ಲಿ ಇರುವವರು ರಜೆಯನ್ನು ರದ್ದುಗೊಳಿಸಿ ಕರ್ತವ್ಯಕ್ಕೆ ಹಾಜರಾಗಿ’ ಎಂದು ಬಿಎಂಎಸ್‌ ಮನವಿ ಮಾಡಿದೆ.

‘ಅಗತ್ಯವಿದ್ದರೆ ಅಧಿಕ ಸಮಯ, ಹೆಚ್ಚುವರಿ ಸಂಬಳವಿಲ್ಲದೆ ಕರ್ತವ್ಯಕ್ಕೆ ಹಾಜರಾಗಿ, ಯುದ್ಧದ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.