ADVERTISEMENT

ಪಾಕ್‌ಗೆ ಮತ್ತೆ ಆಘಾತ ನೀಡುವ ಸಮಯವಿದು: ವಾಯು ಸೇನೆ ಮಾಜಿ ಮುಖ್ಯಸ್ಥ ಅರೂಪ್ ರಾಹ

ಪಿಟಿಐ
Published 25 ಏಪ್ರಿಲ್ 2025, 6:50 IST
Last Updated 25 ಏಪ್ರಿಲ್ 2025, 6:50 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೋಲ್ಕತ್ತ: ‘ಅಣ್ವಸ್ತ್ರ ಹೊಂದಿರುವ ಎರಡು ರಾಷ್ಟ್ರಗಳು ಪರಸ್ಪರ ಯುದ್ಧದಲ್ಲಿ ತೊಡಗುವುದು ಅಸಾಧ್ಯ ಎಂಬ ನಂಬಿಕೆಯನ್ನು ತೊಡೆದುಹಾಕಿರುವ ಭಾರತ, ಉರಿ ಮತ್ತು ಬಾಲಾಕೋಟ್‌ ದಾಳಿಯ ಮೂಲಕ ಭಯೋತ್ಪಾದನೆಗೆ ತಕ್ಕ ಪ್ರತ್ಯುತ್ತರ ನೀಡಿದೆ. ಪಹಲ್ಗಾಮ್‌ನ ರಕ್ತಪಾತದ ನಂತರ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆ ನಿರ್ಮೂಲನೆಗೆ ಅಂಥದ್ದೇ ದಾಳಿ ನಡೆಸಿ ಆಘಾತ ನೀಡುವ ಅಗತ್ಯ ಭಾರತಕ್ಕಿದೆ’ ಎಂದು ವಾಯುಸೇನೆಯ ಮಾಜಿ ಮುಖ್ಯಸ್ಥ ಅರೂಪ್ ರಾಹ ಅಭಿಪ್ರಾಯಪಟ್ಟಿದ್ದಾರೆ.

‘ಉರಿ ದಾಳಿಯ ನಂತದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ಅಡಗುದಾಣ ಮತ್ತು ಲಾಂಚ್‌ ಪ್ಯಾಡ್‌ಗಳನ್ನು ಸರ್ಜಿಕಲ್ ಸ್ಟ್ರೈಕ್ ನಡೆಸಿ ಧ್ವಂಸಗೊಳಿಸಲಾಗಿತ್ತು. ಪುಲ್ವಾಮಾ ದಾಳಿ ಬೆನ್ನಲ್ಲೇ ಬಾಲಾಕೋಟ್‌ ವೈಮಾನಿಕ ದಾಳಿ ನಡೆಸಲಾಗಿತ್ತು. ಹಿಂದಿನ ದಾಳಿಗಳು ಭಯೋತ್ಪಾದನೆ ಹರಡುವವರನ್ನು ಸದೆಬಡೆಯುವಲ್ಲಿ ಭಾರತೀಯ ವಾಯುಸೇನೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ’ ಎಂದಿದ್ದಾರೆ.

ADVERTISEMENT

'ಇಂಥ ದಾಳಿಯನ್ನು ಭಾರತೀಯ ಸಶಸ್ತ್ರ ಪಡೆಗಳು ನಡೆಸುವುದು ಇಂದಿನ ಅಗತ್ಯವಾಗಿದ್ದು, ಶತ್ರುಗಳು ತಾವು ಯಾರೊಂದಿಗೆ ವ್ಯವಹರಿಸಿದೆವು ಎಂಬುದನ್ನು ಮನದಟ್ಟು ಮಾಡಿಸುವ ಅಗತ್ಯವಿದೆ. ಇದು ಈ ಹೊತ್ತಿನ ತುರ್ತು ಅಗತ್ಯವಾಗಿದೆ’ ಎಂದು ರಾಹ ಹೇಳಿದ್ದಾರೆ.

‘ಅದನ್ನು ಹೇಗೆ ಮತ್ತು ಯಾವಾಗ ನಡೆಸಬೇಕು ಎಂದು ಹೇಳುವ ಸ್ಥಾನದಲ್ಲಿ ನಾನೀಗ ಇಲ್ಲ. ಆದರೆ ಹಿಂದಿನ ಯಶಸ್ವಿ ದಾಳಿಯ ಅನುಭವ ನಮಗಿದೆ. ಹೀಗಾಗಿ ಇಂಥದ್ದನ್ನು ಯಶಸ್ವಿಯಾಗಿ ನಿರ್ವಹಿಸುವ ಎಲ್ಲಾ ಸಾಮರ್ಥ್ಯ ನಮ್ಮ ಸೈನ್ಯಕ್ಕಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನದೊಂದಿಗಿನ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಭಾರತ ಕಳಚಿಕೊಂಡ ಬೆನ್ನಲ್ಲೇ ರಾಹ ಅವರು ಈ ಹೇಳಿಕೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ಮುಗ್ದ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಪ್ರಾಣ ಕಳೆದುಕೊಂಡರು. ಇದಕ್ಕೆ ಪ್ರತೀಕಾರವಾಗಿ ಸಿಂಧೂ ಜಲ ಒಪ್ಪಂದ ಅಮಾನತು, ವಿಸಾ ರದ್ದು, ಅಟ್ಟಾರಿ ಗಡಿ ಬಂದ್‌ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿತು. 

ಪಾಕಿಸ್ತಾನದ ಸೇನೆಗೆ ನಾಚಿಕೆಯೇ ಇಲ್ಲ

‘1971ರಲ್ಲಿ ಆ ದೇಶದ ಸೇನೆಯ 93 ಸಾವಿರ ಸೈನಿಕರು ಶರಣಾಗುವ ಮೂಲಕ ಅವಮಾನ ಎದುರಿಸಿದರು. ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೆ ಭಿಕ್ಷಾಪಾತ್ರ ಹಿಡಿದು ಪ್ರತಿ ರಾಷ್ಟ್ರಗಳ ಮುಂದೆ ಅಂಗಲಾಚುವ ಸ್ಥಿತಿಯಲ್ಲಿದೆ. ಇಂಥ ಸಂದರ್ಭದಲ್ಲಿ ಭಯೋತ್ಪಾದಕರಿಗೆ ನೆರವು ನೀಡುವ ಮೂಲಕ ಕುಕೃತ್ಯಗಳಿಗೆ ಬೆಂಬಲ ನೀಡುತ್ತಿದೆ’ ಎಂದು ರಾಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಭಯೋತ್ಪಾದಕರ ಒಳನುಸುಳುವಿಕೆಯನ್ನು ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನಗಳಾದ ಉಪಗ್ರಹ ಚಿತ್ರಗಳು, ಡ್ರೋನ್‌ ಮತ್ತು ಮಾನವ ರಹಿತ ವಿಮಾನಗಳ ಬಳಕೆಯನ್ನು ಪರಿಣಾಮಕಾರಿಯಾಗಿ ಬಳಸುವ ಅಗತ್ಯವಿದೆ. ಪರಿಣಾಮಕಾರಿ ಮತ್ತು ಕಾರ್ಯಸಾಧ್ಯವಾಗಿಸುವ ಬೇಹುಗಾರಿಕೆ ಮೂಲಕ ಮಾತ್ರ ಭವಿಷ್ಯದಲ್ಲಿ ಇಂಥ ದುರ್ಘಟನೆಗಳನ್ನು ತಡೆಗಟ್ಟಲು ಸಾಧ್ಯ. ತಂತ್ರಜ್ಞಾನವನ್ನು ಬಳಕೆ ಮಾಡಿದರೂ, ವ್ಯಕ್ತಿಗಳ ಪಾತ್ರ ಮಹತ್ವದ್ದಾಗಿದೆ’ ಎಂದು ವಾಯು ಸೇನೆಯ ನಿವೃತ್ತ ಮುಖ್ಯಸ್ಥ ಅರೂಪ್ ರಾಹ ಅಭಿಪ್ರಾಯಪಟ್ಟಿದ್ದಾರೆ.

2016 ಸೆ. 28ರಂದು ಉರಿಯಲ್ಲಿರುವ ಭಾರತೀಯ ಸೇನಾ ನೆಲೆಯ ಮೇಲೆ ಜೈಶ್ ಎ ಮೊಹಮ್ಮದ್‌ ದಾಳಿ ನಡೆಸಿತ್ತು. ಇದರಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು. ಹಲವರು ಗಾಯಗೊಂಡರು. ಇದಾಗಿ 11 ದಿನಗಳ ನಂತರ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್‌ ನಡೆಸಿತು. ಇದರಲ್ಲಿ 150 ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿತು.

2019ರ ಫೆ. 14ರಂದು ಪುಲ್ವಾಮಾದಲ್ಲಿ ಭಾರತೀಯ ಸೈನಿಕರನ್ನು ಕರೆತರುತ್ತಿದ್ದ ಸೇನಾ ವಾಹನಕ್ಕೆ ಬಾಂಬ್‌ ಇರುವ ವಾಹನ ಡಿಕ್ಕಿಪಡಿಸಿ ಸಿಆರ್‌ಪಿಎಫ್‌ನ 40 ಸೈನಿಕರು ಹತ್ಯೆಗಯ್ಯಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಫೆ. 26ರಂದು ಗಡಿ ನಿಯಂತ್ರಣ ರೇಖೆ ದಾಟಿದ ಭಾರತೀಯ ವಾಯು ಸೇನೆಯ ಯುದ್ಧ ವಿಮಾನಗಳು ಬಾಲಾಕೋಟ್‌ನಲ್ಲಿದ್ದ ಜೈಶ್‌ನ ನೆಲೆಗಳ ಮೇಲೆ ದಾಳಿ ನಡೆಸಿ 350 ಭಯೋತ್ಪಾದಕರನ್ನು ಕೊಂದುಹಾಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.