ADVERTISEMENT

ರಕ್ಷಣಾ ಕಾರ್ಯದರ್ಶಿಗೆ ಇಸ್ರೇಲ್ ಸೇನಾ ಡಿಜಿ ಕರೆ: Operation Sindoorಗೆ ಶ್ಲಾಘನೆ

ಪಿಟಿಐ
Published 15 ಮೇ 2025, 15:42 IST
Last Updated 15 ಮೇ 2025, 15:42 IST
   

ನವದೆಹಲಿ: ‘ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಇಸ್ರೇಲ್ ಸದಾ ಬೆಂಬಲ ನೀಡಲಿದೆ’ ಎಂದು ಹೇಳಿರುವ ಇಸ್ರೇಲ್‌ ರಕ್ಷಣಾ ಸಚಿವಾಲಯದ ಡೈರೆಕ್ಟರ್ ಜನರಲ್‌ ಮೇಜರ್ ಜನರಲ್ ಅಮೀರ್ ಬರಮ್‌ ಹೇಳಿದ್ದಾರೆ.

ಭಾರತದ ರಕ್ಷಣಾ ಇಲಾಖೆ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಅವರೊಂದಿಗೆ ಇತ್ತೀಚೆಗೆ ನಡೆಸಿದ ದೂರವಾಣಿ ಸಂಭಾಷಣೆ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಇತ್ತೀಚೆಗೆ ಭಾರತೀಯ ಸೇನೆ ಕೈಗೊಂಡ ಆಪರೇಷನ್ ಸಿಂಧೂರವನ್ನು ಅವರು ಶ್ಲಾಘಿಸಿದ್ದಾರೆ.

ಮಾತುಕತೆ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಅಧಿಕಾರಿಗಳು, ತಮ್ಮ ಸೇನಾ ಒಪ್ಪಂದವನ್ನು ಇನ್ನಷ್ಟು ಗಟ್ಟಿಗೊಳಿಸುವ ಮತ್ತು ಸಹಕಾರ ಕಾರ್ಯತಂತ್ರಗಳನ್ನು ಇನ್ನಷ್ಟು ಬಲಪಡಿಸುವಲ್ಲಿ ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸುವ ಕುರಿತು ಚರ್ಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಮ್ಮು ಮತ್ತು ಕಾಶ್ಮಿರದ ಅನಂತನಾಗ್‌ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು. ಎರಡು ವಾರದ ನಂತರ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯನ್ನು ಭಾರತೀಯ ಸೇನೆ ನಡೆಸಿತ್ತು. ಸೇನೆಯ ನಿಖರ ದಾಳಿಗೆ ನೂರಾರು ಉಗ್ರರು ಹತರಾಗಿದ್ದರು. ಅದಕ್ಕೆ ಪ್ರತಿಯಾಗಿ, ಪಾಕ್‌ ಪಡೆಗಳು ಗಡಿಯುದ್ದಕ್ಕೂ ದಾಳಿ ನಡೆಸಿದ್ದರಿಂದ, ಉಭಯ ದೇಶಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾಣವಾಗಿತ್ತು.

ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ಈ ಕುರಿತು ಟ್ವೀಟ್ ಮಾಡಿ, ‘ತನ್ನ ರಕ್ಷಣೆಗೆ ಭಾರತ ಹಕ್ಕನ್ನು ಇಸ್ರೇಲ್ ಸದಾ ಬೆಂಬಲಿಸಲಿದೆ. ಅಮಾಯಕರ ಮೇಲಿನ ತಮ್ಮ ಹೀನ ಕೃತ್ಯದಿಂದ ಅಡಗಿಕೊಳ್ಳಲು ಯಾವುದೇ ಜಾಗವಿಲ್ಲ ಎಂಬುದನ್ನು ಭಯೋತ್ಪಾದಕರು ಅರಿಯಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.