ADVERTISEMENT

ಪಹಲ್ಗಾಮ್‌, ಆಪರೇಷನ್ ಸಿಂಧೂರ ಬೆನ್ನಲ್ಲೇ PM ಮೋದಿ ಜಾತಿ ಗಣತಿ ಘೋಷಣೆ: ಕಾಂಗ್ರೆಸ್

ಪಿಟಿಐ
Published 26 ಮೇ 2025, 7:13 IST
Last Updated 26 ಮೇ 2025, 7:13 IST
<div class="paragraphs"><p>ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್&nbsp;</p><p></p></div>

ನರೇಂದ್ರ ಮೋದಿ ಹಾಗೂ ಜೈರಾಮ್ ರಮೇಶ್ 

   

ಪಿಟಿಐ ಚಿತ್ರಗಳು

ADVERTISEMENT

ನವದೆಹಲಿ: ಕಾಶ್ಮೀರದದ ಪಹಲ್ಗಾಮ್‌ನಲ್ಲಿ ಏ. 22ರಂದು ಭಯೋತ್ಪಾದಕರು 26 ಪ್ರವಾಸಿಗರನ್ನು ಗುಂಡಿಟ್ಟು ಕೊಂದ ಬೆನ್ನಲ್ಲೇ ಭಾರತೀಯ ಸೇನೆ ಆಪರೇಷನ್ ಸಿಂಧೂರ ನಡೆಸಿತು. ಆದರೆ ಇದೇ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಕ್ಕಿದ್ದಂತೆ ಜನಗಣತಿಯೊಂದಿಗೆ ಜಾತಿ ಗಣತಿ (ಏ. 30) ಘೋಷಿಸಿದ್ದು ಅಚ್ಚರಿ ಮೂಡಿಸಿದೆ ಎಂದು ಕಾಂಗ್ರೆಸ್ ಹೇಳಿದೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಎರಡು ಹಳೆಯ ವಿಡಿಯೊಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಎನ್‌ಡಿಎ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಜಾತಿ ಗಣತಿ ಘೋಷಣೆಯ ಸಂಪೂರ್ಣ ಶ್ರೇಯ ತನ್ನದೇ ಎಂದು ಮೋದಿ ಹೇಳಿದ್ದಾರೆ’ ಎಂದು ಟೀಕಿಸಿದ್ದಾರೆ.

2023ರ ಅ. 2ರಂದು ಬಿಹಾರದ ಜಾತಿ ಗಣತಿ ಸಮೀಕ್ಷೆ ಬಿಡುಗಡೆ ಸಂದರ್ಭದಲ್ಲಿನ ವಿಡಿಯೊ ಮತ್ತು 2024ರ ಏ. 28ರಂದು ಜಾತಿ ಗಣತಿಗೆ ಕಾಂಗ್ರೆಸ್‌ ಇಟ್ಟ ಬೇಡಿಕೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದ ಎರಡು ವಿಡಿಯೊ ತುಣುಕುಗಳನ್ನು ಅವರು ಹಂಚಿಕೊಂಡಿದ್ದಾರೆ.

‘ಜಾತಿ ಗಣತಿ ಎಂಬುದು ಹಿಂದುಳಿದ ಸಮಾಜವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ಪ್ರಮುಖ ಮಾರ್ಗವಾಗಿದೆ. ಜಾತಿ ರಾಜಕಾರಣದಲ್ಲಿ ಸರ್ಕಾರವು ನಂಬಿಕೆ ಇಟ್ಟಿಲ್ಲ. ಆದರೆ ಹಿಂದುಳಿದ ಸಮಾಜಗಳ ಸಬಲೀಕರಣಕ್ಕೆ ಬದ್ಧವಾಗಿದೆ’ ಎಂದು ಭಾನುವಾರ ನಡೆದ ಸಭೆಯಲ್ಲಿ ಹೇಳಿದ್ದರು.

ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜೈರಾಮ್ ರಮೇಶ್‌, ‘ವಿರೋಧ ಪಕ್ಷಗಳು ಸಮಾಜವನ್ನು ಜಾತಿ ಆಧಾರದಲ್ಲಿ ವಿಭಜಿಸುವ ಮೂಲಕ ಇಂದಿಗೂ ಪಾಪವನ್ನು ಮುಂದುವರಿಸಿವೆ’ ಎಂದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಜಾತಿ ಗಣತಿಗೆ ಕಾಂಗ್ರೆಸ್‌ ಆಗ್ರಹಿಸಿದಾಗ ಪ್ರತಿಕ್ರಿಯಿಸಿದ್ದ ಮೋದಿ, ‘ಇದು ನಗರ ನಕ್ಸಲರ ಮನಸ್ಥಿತಿಯ ಭಾಗವಾಗಿದೆ’ ಎಂದಿದ್ದನ್ನೂ ಹಂಚಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿ, ‘ಜಾತಿ ಗಣತಿ ಎಂಬ ಪರಿಕಲ್ಪನೆಯು ಆಡಳಿತಾರೂಢ ಮೈತ್ರಿಕೂಟದ ಆಲೋಚನೆಯಲ್ಲಿ ಸದಾ ಇದೆ. ಬಿಹಾರದಲ್ಲಿರುವ ಎನ್‌ಡಿಎ ಭಾಗವಾದ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಇದನ್ನು ಮೊದಲಿಗೆ ಜಾರಿಗೆ ತಂದಿದೆ. ದಲಿತರು ಹಾಗೂ ಇನ್ನಿತರ ಕೆಲ ಸಮಾಜಗಳು ಇಂದಿಗೂ ಹಿಂದುಳಿದಿದ್ದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ’ ಎಂದಿದ್ದಾರೆ.

ಸ್ವಾತಂತ್ರ ಬಂದ ನಂತರ ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ಜಾತಿ ಗಣತಿಯನ್ನೂ ಸೇರಿಸಲಾಗುವುದು ಏ. 30ರಂದು ಕೇಂದ್ರ ಸರ್ಕಾರ ಘೋಷಿಸಿತ್ತು. ಇದಕ್ಕೂ ಪೂರ್ವದಲ್ಲಿ ಕಾಂಗ್ರೆಸ್ ಸಹಿತ ಇತರ ವಿರೋಧ ಪಕ್ಷಗಳು ಜಾತಿ ಗಣತಿ ನಡೆಸುವಂತೆ ಪಟ್ಟು ಹಿಡಿದಿದ್ದವು. ಬಿಹಾರ, ತೆಲಂಗಾಣ ಮತ್ತು ಕರ್ನಾಟಕದಲ್ಲ ಇಂಥ ಸಮೀಕ್ಷೆ ನಡೆದ ಉದಾಹರಣೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.