ಪ್ರಾತಿನಿಧಿಕ ಚಿತ್ರ
ಜಮ್ಮು: ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆಯ ಅಪ್ರಚೋದಿತ ದಾಳಿ ಯತ್ನಕ್ಕೆ ಪ್ರತಿಯಾಗಿ ಆಪರೇಷನ್ ಸಿಂಧೂರವನ್ನು ಮುಂದುವರಿಸಿರುವ ಗಡಿ ರಕ್ಷಣಾ ಪಡೆಯು, ಪಾಕಿಸ್ತಾನದ 76 ಸೇನಾ ನೆಲೆ ಹಾಗೂ 42 ಮುಂಚೂಣಿ ರಕ್ಷಣಾ ನೆಲೆ (ಎಫ್‌ಡಿಎಲ್) ಗಳನ್ನು ಗುರಿಯಾಗಿಸಿ ಪ್ರತಿ ದಾಳಿ ನಡೆಸಿದೆ. ಜತೆಗೆ ಭಯೋತ್ಪಾದಕರ ಮೂರು ಲಾಂಚ್ ಪ್ಯಾಡ್‌ಗಳನ್ನು ನಾಶಪಡಿಸಿದೆ.
40ರಿಂದ 50 ಉಗ್ರರನ್ನು ಭಾರತದೊಳಗೆ ಕಳುಹಿಸುವ ಪ್ರಯತ್ನವಾಗಿ ಪಾಕಿಸ್ತಾನ ಸೇನೆಯು ಭಾರತದ 60 ಸೇನಾ ನೆಲೆಗಳು ಮತ್ತು 49 ಎಫ್‌ಡಿಎಲ್‌ಗಳನ್ನು ಗುರಿಯಾಗಿಸಿ ಶೆಲ್ ಮತ್ತು ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಗಡಿ ರಕ್ಷಣಾ ಪಡೆ ದಾಳಿ ನಡೆಸಿ, ಪಾಕಿಸ್ತಾನಿ ಸೇನೆಯ ಕೃತ್ಯವನ್ನು ವಿಫಲಗೊಳಿಸಿತು ಎಂದು ಬಿಎಸ್‌ಎಫ್‌ನ ಡಿಐಜಿ ಚಿತೆರ್‌ಪೌಲ್ ಸಿಂಗ್ ಹೇಳಿದ್ದಾರೆ.
‘ಸುಂದರಬನಿ ಬಳಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಸ್ಥಾಪಿಸಿದ್ದ ಉಗ್ರರ ಲಾಂಚ್ ಪ್ಯಾಡ್ ಅನ್ನು ಬಿಎಸ್‌ಎಫ್ ನಾಶಗೊಳಿಸಿದೆ. ಹೀಗಾಗಿ ಈಗ ಈ ಭಾಗದಿಂದ ಉಗ್ರರ ಯಾವುದೇ ಚಲನವಲನ ಕಂಡುಬರುತ್ತಿಲ್ಲ’ ಎಂದು ತಿಳಿಸಿದ್ದಾರೆ.
‘ಮೇ 9 ಹಾಗೂ 10ರಂದು ನಡೆಸಲಾದ ಆಪರೇಷನ್ ಸಿಂಧೂರ ದಾಳಿಯಲ್ಲಿ ‘ಚಿಕ್ಕನ್ ನೆಕ್’ ಎಂಬ ಪ್ರದೇಶದಲ್ಲಿದ್ದ ಲಷ್ಕರ್ ಎ ತಯಬಾ ಉಗ್ರ ಸಂಘಟನೆಯ ಲಾಂಚ್ ಪ್ಯಾಡ್ ಅನ್ನು ನಿಷ್ಕ್ರಿಯೆಗೊಳಿಸಲಾಗಿದೆ. ಸದ್ಯ ನಡೆದಿರುವ ಪ್ರತಿದಾಳಿಯಲ್ಲಿ ಉಗ್ರರ ನೆಲೆಗಳಿಗೆ ಆಗಿರುವ ಹಾನಿಯ ಪ್ರಮಾಣದ ಮಾಹಿತಿಯನ್ನು ನಮ್ಮ ಮೂಲಗಳ ಮೂಲಕ ಕಲೆ ಹಾಕಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ಗುಂಡಿನ ದಾಳಿ ನಡೆಸಿದ್ದರು. 26 ಜನರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.
ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಉಗ್ರರ ಕೆಲವು ನೆಲೆಗಳು ಹಾಗೂ ನೂರಾರು ಭಯೋತ್ಪಾದಕರನ್ನ ಹತ್ಯೆಗೈದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.